ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಡಯಾಲಿಸೀಸ್ ಕೇಂದ್ರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಸರ್ಜನ್ ಜೊತೆ ಮಾತುಕತೆ ನಡೆಸಿದ ಸಚಿವೆ, ಡಯಾಲೀಸ್ ಕೇಂದ್ರದ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಳಿಕ ಸ್ಥಳದಲ್ಲೇ ಆರೋಗ್ಯ ಇಲಾಖೆಯ ಕಮಿಷನರ್ ಗೆ ಫೋನ್ ಕರೆ ಮಾಡಿದರು. ಆಸ್ಪತ್ರೆಯ ಒಟ್ಟು 11 ಡಯಾಲಿಸೀಸ್ ಯಂತ್ರಗಳು ಕಾರ್ಯ ಸ್ಥಗಿತಗೊಳಿಸಿದ್ದು, ಇದರಿಂದ ರೋಗಿಗಳು ಚಿಕಿತ್ಸೆ ಇಲ್ಲದೆ ಪರದಾಡುವಂತಾಗಿದೆ. ಈ ಬಗ್ಗೆ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು. ಹಾಗೆ ಡಯಾಲಿಸೀಸ್ ರೋಗಿಗಳ ಬಗ್ಗೆಯೂ ಗಮನಹರಿಸಬೇಕು. ಯಾವುದೇ ಮಾಹಿತಿ ನೀಡದೆ, ಡಯಾಲಿಸೀಸ್ ಚಿಕಿತ್ಸೆ ಸ್ಥಗಿತಗೊಳಿಸಿದ ಏಜೆನ್ಸಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಯಶ್ ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪ್ರಭಾರ ಸರ್ಜನ್ ವೀಣಾ ಹಾಗೂ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.