Thursday, September 19, 2024

ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಮಾತ್ರ ನಾವು ಉತ್ತಮ ಆರೋಗ್ಯ ಹೊಂದಲು ಸಾಧ್ಯ: ಜಿಲ್ಲಾಧಿಕಾರಿ ಕೆ ವಿದ್ಯಾ ಕುಮಾರಿ

Must read

ಉಡುಪಿ: ನಮ್ಮ ಉತ್ತಮ ಆರೋಗ್ಯಕ್ಕೆ ವೈಯಕ್ತಿಕ ಸ್ವಚ್ಛತೆ, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಸೇರಿದಂತೆ ಎಲ್ಲಾ ರೀತಿಯ ಸ್ವಚ್ಛತೆ ಬಹಳ ಅವಶ್ಯಕ. ನಮ್ಮ ದೈನಂದಿನ ಜೀವನದಲ್ಲಿ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ ಕೆ. ವಿದ್ಯಾ ಕುಮಾರಿ ತಿಳಿಸಿದರು.

ಅವರು ಇಂದು ಉಡುಪಿ ತಾಲ್ಲೂಕಿನ ಬಡ ನಿಡಿಯೂರು ಹಾಗೂ ಕೆಮ್ಮಣ್ಣು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸರೆ ಬೀಚ್ ನಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನ ಸ್ಮರಣಾರ್ಥ ವಾಗಿ ಆಯೋಜಿಸಲಾಗಿರುವ ಸ್ವಚ್ಛತಾ ಹೀ ಸೇವಾ ಆಂದೋಲನ ಅಂಗವಾಗಿ ನಡೆದ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಮಾತನಾಡಿದರು.

ಸ್ವಚ್ಛತೆ ಸ್ವಸ್ಥ ಸಮಾಜದ ಮೂಲಾಧಾರವಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡಾಗ ಮಾತ್ರ ನಾವು ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.

ನಾವು ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಬಳಸಿದ ಪ್ಲಾಸ್ಟಿಕ್ ನ್ನು ಅಲ್ಲಲ್ಲಿ ಎಸೆಯುವ ಬದಲು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಪರಿಸರಕ್ಕೆ ಸೇರಿ ಮಾನವ ಸೇರಿದಂತೆ ಜೀವಸಂಕುಲಗಳ ಅವನತಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಿ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಮಾತನಾಡಿ, ಇಂದು ಬೀಚ್ ಸ್ವಚ್ಛತೆಯಲ್ಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಣೆ ಮಾಡಿದ್ದೇವೆ. ಇದಕ್ಕೆಲ್ಲ ಕಾರಣ ತ್ಯಾಜ್ಯವನ್ನು ಎಲ್ಲಂದರಲ್ಲಿ ಹಾಕಿರುವುದು , ತ್ಯಾಜ್ಯವನ್ನು ಸೂಕ್ತ ಜಾಗದಲ್ಲಿ ಹಾಕಿದ್ದಲ್ಲಿ ಈಗೆ ಆಗುತ್ತಿರಲಿಲ್ಲ. ನಾವು ಮನೆಯಲ್ಲಿ ಉತ್ಪತ್ತಿ ಮಾಡುವ ಕಸವನ್ನು ವಿಂಗಡಿಸಿ ಗ್ರಾಮ ಪಂಚಾಯಿತಿ ವಾಹನಕ್ಕೆ ನೀಡಿದಲ್ಲಿ ಈ ತರಹ ಬೀಚ್ ನಲ್ಲಿ ಕಸ ಬಂದು ಸೇರುವುದು ತಪ್ಪುತ್ತದೆ. ಆದ್ದರಿಂದ ಮನೆಯ ಕಸವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು ಎಂದರು.

ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಸ್ವಚ್ಛತಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಮುಖ್ಯ ಯೋಜನಾಧಿಕಾರಿ, ಶ್ರೀನಿವಾಸ್ ರಾವ್, ಕೆಮ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮ ರವೀಂದ್ರ, ಬಡನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here