ಉಡುಪಿ: ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಜನ್ಮ ತ್ರಿಶತಾಬ್ದಿ ಆಚರಣೆ ಅಂಗವಾಗಿ ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ, ಪದ್ಮಶಾಲಿ ನೇಕಾರ ಪ್ರತಿಷ್ಠಾನ ಮತ್ತು ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಜನ್ಮ ತ್ರಿಶತಾಬ್ದಿ ಆಚರಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ “ಅಹಲ್ಯಾಬಾಯಿ ಹೋಳ್ಕರ್ ಚಿತ್ರ ಬಿಡಿಸುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಅಹಲ್ಯಾಬಾಯಿ ಪೋಷಾಕಿನಲ್ಲಿ ವೇಷಭೂಷಣ ಸ್ಪರ್ಧೆಯನ್ನು ಇದೇ ಜ. 12ರಂದು ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಅಧ್ಯಕ್ಷ ರತ್ನಾಕರ ಇಂದ್ರಾಳಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10ರಿಂದ ಚಿತ್ರ ಬಿಡಿಸುವ ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಲಿದ್ದು, ಕಿರಿಯರ ವಿಭಾಗದಲ್ಲಿ 3ನೇ ತರಗತಿಯೊಳಗಿನ ವಿದ್ಯಾರ್ಥಿಗಳು, ಪ್ರಾಥಮಿಕ ವಿಭಾಗದಲ್ಲಿ 4ನೇ ತರಗತಿಯಿಂದ 7ನೇ ತರಗತಿಯೊಳಗಿನ ವಿದ್ಯಾರ್ಥಿಗಳು, ಪ್ರೌಢ ವಿಭಾಗದಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು. ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢ ವಿಭಾಗದಲ್ಲಿ 8ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ, ಕಾಲೇಜು ವಿಭಾಗದಲ್ಲಿ ಪದವಿ ಪೂರ್ವ ಮತ್ತು ಪದವಿಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ನಾನೂ ಅಹಲ್ಯಾಬಾಯಿ ಸ್ಪರ್ಧೆ:
ಮಧ್ಯಾಹ್ನ 1 ಗಂಟೆಯಿಂದ ರಾಜಮಾತೆ ಅಹಲ್ಯಬಾಯಿ ಹೋಳ್ಕರ್ ಸಂಸ್ಮರಣೆಗಾಗಿ ನಾನು ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಎನ್ನುವ ಪರಿಕಲ್ಪನೆಯಲ್ಲಿ ವೇಷಭೂಷಣ ಸ್ಪರ್ಧೆ ನಡೆಯಲಿದ್ದು, 16 ರಿಂದ 30ರ ವರೆಗಿನ ವಯಸ್ಸಿನ ಯುವತಿಯರು, 31 ರಿಂದ 50ರ ವರೆಗಿನ ಮಹಿಳೆಯರು, 51ರಿಂದ ಮೇಲ್ಪಟ್ಟ ಸ್ತ್ರೀಯರಿಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ವೇದಿಕೆಯಲ್ಲಿ ಕಾರ್ಯಕ್ರಮಕ್ಕಾಗಿ ಅರಮನೆಯ ದರ್ಬಾರ್ ಮಾದರಿ ನಿರ್ಮಿಸಲಾಗುತ್ತದೆ. ಎಲ್ಲಾ ಸ್ಪರ್ಧೆಗಳಿಗೆ ಅರ್ಧ ಗಂಟೆ ಮುಂಚಿತವಾಗಿ ಹೆಸರನ್ನು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 97432 93043, 93563 99902 ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪುತ್ತಿಗೆ ಮಠದ ದಿವಾನ್ ನಾಗರಾಜ ಆಚಾರ್ಯ, ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಪ್ರಮುಖರಾದ ರಮೇಶ್ ಭಟ್, ಲಕ್ಷ್ಮೀ ಹೆಬ್ಬಾರ್, ಅವಿನಾಶ್ ಶೆಟ್ಟಿಗಾರ್, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಉಪಸ್ಥಿತರಿದ್ದರು.