ಉಡುಪಿ: ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಜ.4ರಂದು ತಡರಾತ್ರಿ ವೇಳೆ ಶಿವಪುರ ಗ್ರಾಮದ ರಾಂಪುರ ಎಂಬಲ್ಲಿ ನಡೆದಿದೆ.
ಮೃತರನ್ನು ಶಿವಪುರ ಮೂರ್ಸಾಲು ನಿವಾಸಿ ರಾಹುಲ್(25) ಎಂದು ಗುರುತಿಸಲಾಗಿದೆ. ಹೆಬ್ರಿ ಕಡೆಯಿಂದ ಶಿವಪುರ ಕಡೆಗೆ ಹೋಗುತ್ತಿದ್ದ ಕಾರು, ಎದುರಿನಿಂದ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರ ಪರಿಣಾಮ ಸವಾರ ರಾಹುಲ್ ಬೈಕ್ ಸಮೇತ ರಸ್ತೆಗೆ ಬಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ರಾಹುಲ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಜ.5ರಂದು ಬೆಳಗ್ಗೆ 7 ಗಂಟೆಗೆ ಸುಮಾರಿಗೆ ಮೃತಪಟ್ಟರು ಎಂದು ತಿಳಿದುಬಂದಿದೆ. ರಾಹುಲ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಬ್ರಿ ತಾಲೂಕು ಕಾರ್ಯವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.