ಉಡುಪಿ: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ದತ್ತ ಪೀಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದತ್ತಮಾಲಾ ಅಭಿಯಾನ ನ.4 ರಿಂದ 10 ರವರೆಗೆ ನಡೆಯಲಿದ್ದು, ಉಡುಪಿಯಿಂದ 500ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಸುದರ್ಶನ ಪೂಜಾರಿ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 50,000ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ನ. 4ರಂದು ದತ್ತಮಾಲಾಧಾರಣೆಯೊಂದಿಗೆ ದತ್ತ ದಿಪೋತ್ಸವ, ಪಡಿಸಂಗ್ರಹ (ಭೀಕ್ಷಾಟನೆ), 10 ರಂದು ಚಿಕ್ಕಮಗಳೂರು ನಗರದಲ್ಲಿ ಧರ್ಮಸಭೆ, ಶೋಭಯಾತ್ರೆ, ನಂತರ ದತ್ತಪಿಠದಲ್ಲಿ ಹೋಮ, ಹವನ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಗಲಿದೆ. ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನ. 10ರಂದು ನಡೆಯುವ ಧರ್ಮ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಹೈದರಾಬಾದ್ ಭಾಜಪಾ ನಾಯಕಿ ಮಾಧವಿ ಲತಾ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಮಾಜಿ ಸಂಸದ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ ಎಂದರು.
ಇಸ್ಲಾಮಿಕ್ ಅತಿಕ್ರಮಣ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಪ್ರಯತ್ನದ ವಿರುದ್ಧ ಕಳೆದ 20 ವರ್ಷಗಳಿಂದ ಶ್ರೀರಾಮಸೇನೆ ಹೋರಾಟ ನಡೆಸುತ್ತಿದೆ. ದತ್ತಪಿಠದಲ್ಲಿ ಹೋರಾಟದ ಭಾಗವಾಗಿ ನಮಾಜ್, ಮಾಂಸಹಾರ, ಗೋರಿಗಳು ಹಸಿರುಹೊದಿಕೆ ಮುಕ್ತವಾಗಿವೆ. ಅರ್ಚಕರ ನೇಮಕ, ದತ್ತಪಿಠದ ಆಸ್ತಿ ಕಬಳಿಸಿದವರಿಗೆ ನೋಟೀಸ್ ಹೀಗೆ ಹಂತಹಂತವಾಗಿ ಯಶಸ್ಸು ಪಡೆದಿದ್ದೇವೆ ಎಂದು ತಿಳಿಸಿದರು.
ದತ್ತ ಪೀಠದಲ್ಲಿರುವ ಅನಧಿಕೃತ ಇಸ್ಲಾಮಿಕ್ ಕುರುಹುಗಳನ್ನು ಮೂಲ ದರ್ಗಾ ನಾಗೇನಹಳ್ಳಿಗೆ ಸ್ಥಳಾಂತರ ಮಾಡಬೇಕು. ದತ್ತಪಿಠದಲ್ಲಿ ಕೇವಲ ಹಿಂದೂ ಅರ್ಚಕರು ಮಾತ್ರ ಇರಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಕಾರ್ಯಾಧ್ಯಕ್ಷ ಜಯರಾಮ ಅಂಬೆಕಲ್ಲು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುದೀಪ್, ಪದಾಧಿಕಾರಿಗಳಾದ ಸುಜಿತ್, ಶರತ್ ಉಪಸ್ಥಿತರಿದ್ದರು.