ಉಡುಪಿ: ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಆಧಾರದ ಮೇಲೆ ಮತದಾನ ಮಾಡಬೇಕೆಂದಿಲ್ಲ. ವ್ಯಕ್ತಿಗಳ ಸಾಧನೆ ನೋಡಿ ಮತದಾನ ಮಾಡಿ. ಈ ಚುನಾವಣೆಯಿಂದ ಸರ್ಕಾರಗಳು ನಿರ್ಧಾರವಾಗುವುದಿಲ್ಲ. ಹೀಗಾಗಿ ಕರಾವಳಿಯ ಸಮಸ್ಯೆಗಳ ಬಗ್ಗೆ ಅನುಭವ ಇರುವವರನ್ನು ಆಯ್ಕೆ ಮಾಡಿ ಎಂದು ಬಿಜೆಪಿಯ ಉಚ್ಚಾಟಿತ ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಎಂದು ಹೇಳುತ್ತೇನೆ. ಆದರೆ ಇದು ವಿಧಾನಪರಿಷತ್ ಚುನಾವಣೆ, ಇಲ್ಲಿ ಪಕ್ಷ ನೋಡಬೇಡಿ ಎಂದರು.
ಬಿಜೆಪಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಯುವಕ ನಾಯಕನಿಗೆ ಅವಕಾಶ ನೀಡಿದೆ. ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ಕೂಡ ಚೆನ್ನಾಗಿದ್ದಾರೆ. ನನ್ನ ಅಧಿಕಾರ ಅವಧಿಯ ಸಮಯದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರು. ಸಹಕಾರಿ ಧುರಿಣರಾಗಿ ಅನುಭವ ಹೊಂದಿದ್ದಾರೆ. ಒಳ್ಳೆ ಅಭ್ಯರ್ಥಿ ಯಾರು ಎಂದು ಗಮನಿಸಿ ಮತದಾನ ಮಾಡಿ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.
ಬಿಜೆಪಿಗೆ ಮರು ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನನ್ನು ಈತನಕ ಯಾರು ಸಂಪರ್ಕ ಮಾಡಿಲ್ಲ. ನನ್ನನ್ನು ಯಾರು ಮಾತನಾಡಿಸಿಲ್ಲ ಪಕ್ಷಕ್ಕೆ ಬನ್ನಿ ಎಂದು ಕರೆದಿಲ್ಲ. ನನ್ನ ಪಾಡಿಗೆ ಸಾಮಾಜಿಕ ಕೆಲಸ ಮಾಡಿಕೊಂಡಿದ್ದೇನೆ. ಬಿಜೆಪಿ ಸದಸ್ಯತ್ವ ಅಭಿಯಾನ ಆಗುತ್ತಿದೆ. ನಾನು ಮಿಸ್ ಕಾಲ್ ಕೊಟ್ಟು ಬಿಜೆಪಿಯ ಸದಸ್ಯ ಆಗಿದ್ದೇನೆ. ಈ ವಿಚಾರದಲ್ಲಿ ಯಾರ ನಿರ್ಬಂಧನೆ ಇಲ್ಲ. ಸ್ಥಾನೀಯ ಸಂಸ್ಥೆಯವರು ಅದನ್ನು ಅನುಮೋದಿಸಬೇಕು. ಅನುಮೋದಿಸ್ತಾರಾ ಇಲ್ವಾ ಗೊತ್ತಿಲ್ಲ. ಪಕ್ಷ ನನ್ನನ್ನು ಕರೆದರೆ ಸೇರ್ಪಡೆಗೆ ಸಿದ್ಧನಿದ್ದೇನೆ. ನನಗೆ ಯಾರು ಕರೆದಿಲ್ಲ ಹಾಗಾಗಿ ಸುಮ್ಮನಿದ್ದೇನೆ ಎಂದರು.
ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಉಡುಪಿಗೆ ತಪ್ಪಿದ ಪ್ರಾತಿನಿಧ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಉಡುಪಿಯಲ್ಲಿ ಅನೇಕ ಮಂದಿ ಅಭ್ಯರ್ಥಿಗಳಾಗಲು ಸಮರ್ಥರಿದ್ದರು. ವಿಧಾನ ಪರಿಷತ್ ಪದವೀಧರ ಚುನಾವಣೆಯಲ್ಲಿ ಅಭ್ಯರ್ಥಿಯ ಆಯ್ಕೆ ಸರಿಯಾಗಿರಲಿಲ್ಲ. ಅಂದು ಸರಿಯಾದ ಮಾನದಂಡ ಪಾಲಿಸಿರಲಿಲ್ಲ. ಆ ಕಾರಣಕ್ಕೆ ನಾನು ಪಕ್ಷೇತರನಾಗಿ ಸ್ಪರ್ಧಿಸಿದ್ದೆ. ಆ ಚುನಾವಣೆಯಲ್ಲಿ ಕರಾವಳಿಗೆ ಪ್ರಾತಿನಿಧ್ಯ ನೀಡಿರಲಿಲ್ಲ. ಹಿರಿಯರನ್ನು ಕಡೆಗಣಿಸಿ ಅವಕಾಶ ವಂಚಿಸಲಾಗಿತ್ತು. ಆದರೆ ಈ ಬಾರಿ ಪಕ್ಷ ಮಾನದಂಡ ಇಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡಿದೆ. ಹಿಂದುಳಿದ ವರ್ಗದ ಸಣ್ಣ ಜಾತಿಯ ವ್ಯಕ್ತಿಗೆ ಅವಕಾಶ ನೀಡಿದ್ದಾರೆ. ಈ ಆಯ್ಕೆಯನ್ನು ನಾನು ಗೌರವಿಸುತ್ತೇನೆ. ಅನೇಕರು ನಳಿನ್ ಕುಮಾರ್ ಕಟೀಲು ಗೆ ಅವಕಾಶ ನೀಡಬೇಕಿತ್ತು ಎನ್ನುತ್ತಾರೆ. ಕಾರ್ಯಕರ್ತರು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊರಗೆ ನಿಂತು ನೋಡಿದಾಗ ಅಭ್ಯರ್ಥಿಯ ಆಯ್ಕೆ ಎಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಹೇಳಿದರು.