ಉಡುಪಿ: ಅಂಬಲಪಾಡಿ ವಾರ್ಡ್ ವ್ಯಾಪ್ತಿಯ ರಸ್ತೆ ಕಾಮಗಾರಿಯನ್ನು ಸ್ಥಳೀಯ ನಗರಸಭೆ ಸದಸ್ಯರ ಗಮನಕ್ಕೆ ತಾರದೆ ಒಪ್ಪಿಗೆ ಸೂಚಿಸಿರುವ ಪೌರಾಯುಕ್ತರ ವಿರುದ್ಧ ಇಂದು ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ರೋಶವ್ಯಕ್ತವಾಗಿದ್ದು, ಈ ಬಗ್ಗೆ ತಪ್ಪನ್ನು ಒಪ್ಪಿಕೊಂಡ ಪೌರಾಯುಕ್ತ ರಾಯಪ್ಪ ಅವರು ಸಭೆಯಲ್ಲಿ ಕ್ಷಮೆಯಾಚಿಸಿದರು.
ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಅಂಬಲಪಾಡಿ ವಾರ್ಡ್ ಸದಸ್ಯ ಹರೀಶ್ ಶೆಟ್ಟಿ ಅವರು, ನನ್ನ ಗಮನಕ್ಕೆ ಬಾರದೆ ರಸ್ತೆ ಕಾಮಗಾರಿ ಟೆಂಡರ್ ಅನ್ನು ವ್ಯಕ್ತಿಯೊಬ್ಬರಿಗೆ ನೀಡಿದ್ದಾರೆ. 30ರಿಂದ 40 ಲಕ್ಷ ರೂ. ಮೊತ್ತದ ರಸ್ತೆ ಕಾಮಗಾರಿಯ ಟೆಂಡರ್ ನೀಡಲಾಗಿದೆ. ಈ ಮೂಲಕ ಪೌರಾಯುಕ್ತ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ನನ್ನ ಬಳಿ ಸಾವಿರಾರು ಕಡತ ಬರುತ್ತೇವೆ. ಆಗ ನನ್ನಿಂದ ತಪ್ಪು ಆಗಿರಬಹುದು. ನನ್ನ ಗಮನಕ್ಕೆ ಬಂದ ಕೂಡಲೇ ಅದನ್ನು ರದ್ದುಗೊಳಿಸಿದ್ದೇನೆ ಎಂದರು.
ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ನೀವು ಯಾರ ಶಿಫಾರಸಿನ ಮೇಲೆ ಟೆಂಡರ್ ಪಾಸ್ ಮಾಡಿದ್ದೀರಿ ಎಂದು ಸಭೆಗೆ ತಿಳಿಸಿ. ಒಂದು ವೇಳೆ ನಿಮ್ಮಿಂದ ತಪ್ಪಾಗಿದ್ದಾರೆ ಸಭೆಯ ಮುಂದೆ ಕ್ಷಮೆಯಾಚಿಸಬೇಕು ಎಂದು ಹೇಳಿದರು. ಅದರಂತೆ ತಪ್ಪನ್ನು ಒಪ್ಪಿಕೊಂಡ ಪೌರಾಯುಕ್ತರು ಸಭೆಯಲ್ಲಿ ಕ್ಷಮೆಯಾಚಿಸಿದರು.
ಉಡುಪಿ ನಗರದ ಮಸೀದಿ ಸಮೀಪದ ಅಕ್ರಮ ಕಟ್ಟಡವನ್ನು ನಗರಸಭೆಯಿಂದಲೇ ತೆರವುಗೊಳಿಸಿದ್ದು, ಇದೀಗ ಅದೇ ಜಾಗದಲ್ಲಿ ಬೇರೆ ಹೆಸರಿನ ಹೊಟೇಲ್ ಮತ್ತೆ ನಿರ್ಮಿಸಲಾಗಿದೆ. ಇಲ್ಲಿ ಒಂದು ಡೋರ್ ನಂಬರ್‌ನಲ್ಲಿ 200 ಚದರ ವಿಸ್ತ್ರೀರ್ಣದಲ್ಲಿ ಕಟ್ಟಡ ನಿರ್ಮಿಸಲು ಮಾತ್ರ ಅವಕಾಶ ಇದೆ. ಆದರೆ ಇಲ್ಲಿ ಸುಮಾರು 1000 ಚದರ ವಿಸ್ತ್ರೀರ್ಣದ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸ್ಥಳೀಯ ಸದಸ್ಯ ಟಿ.ಜಿ.ಹೆಗ್ಡೆ ಆರೋಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಈ ಹಿಂದಿನ ಪೌರಾಯುಕ್ತರು ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಎನ್‌ಓಸಿ ನೀಡಿದ್ದಾರೆ. ಅದರಂತೆ ಒಂದು ಡೋರ್ ನಂಬರ್‌ನಲ್ಲಿ ಇಲ್ಲಿ ಹೊಟೇಲ್ ನಿರ್ಮಿಸಲಾಗಿದೆ. ನಂತರ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವ ಬಗ್ಗೆ ನಮಗೆ ದೂರು ಬಂದ ಹಿನ್ನೆಲೆಯಲ್ಲಿ ನೋಟೀಸ್ ನೀಡಲಾಗಿದೆ. ಅದರಂತೆ ಇಂಜಿನಿಯರ್ ತನಿಖೆ ನಡೆಸಿ ತೆರವಿಗೆ ನೋಟೀಸ್ ಜಾರಿ ಮಾಡಲಾಗಿದೆ. ಒಂದು ವಾರದೊಳಗೆ ತೆರವುಗೊಳಿಸಿ ಕ್ರಮ ಜರಗಿಸಲಾಗುವುದು ಎಂದು ಹೇಳಿದರು.