Friday, September 20, 2024

ವಿನಯ್ ಕುಮಾರ್ ಸೊರಕೆ ಸತತ ಸೋಲಿನಿಂದ ಹತಾಶರಾಗಿದ್ದಾರೆ: ಗುರ್ಮೆ ಸುರೇಶ್ ಶೆಟ್ಟಿ

Must read

ಉಡುಪಿ: ಸತತ ಎರಡು ಬಾರಿಯ ಸೋಲಿನಿಂದ ವಿನಯ ಕುಮಾರ್ ಸೊರಕೆ ಕಂಗೆಟ್ಟಿದ್ದಾರೆ. ನಮ್ಮದೆ ಸರಕಾರ ಇದೆ, ನಾನು ಏನು ಆಗಿಲ್ಲ ಎಂಬ ಹತಾಶೆ ಅವರನ್ನು ಕಾಡುತ್ತಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಲೇವಡಿ ಮಾಡಿದರು.

ಕಾಪು ಮಯೂರ ಹೋಟೆಲ್ ಸಭಾಂಗಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಆದರೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಸೊರಕೆಗೆ ಟಾಂಗ್ ನೀಡಿದರು.

ಆ ಪುಣ್ಯಾತ್ಮ ಸೊರಕೆ ರಾಜಕೀಯದಲ್ಲಿ ಇರಲಿ. ನಾನು ಸ್ವಾಗತ ಮಾಡ್ತೇನೆ. ಕಳೆದ ಬಾರಿ ನನ್ನ ಕೊನೆಯ ಚುನಾವಣೆಯಂತ ಹೇಳುತ್ತಾ ಜನರನ್ನು‌ ಭಾವನಾತ್ಮಕವಾಗಿ ಮರುಳು ಮಾಡುವ ಕೆಲಸ ಮಾಡಿದ್ದರು. ಅವರು ರಾಜಕೀಯದಲ್ಲಿ ನಿವೃತ್ತಿಯಾಗಲಿ ಎಂದು ನಾನು ಯಾವತ್ತು ಹೇಳುವುದಿಲ್ಲ. ಎಲ್ಲಿಯವರೆಗೆ ಅವರಿಗೆ ಶಕ್ತಿ, ತಾಕತ್ ಇರುತ್ತೊ ಅಲ್ಲಿಯವರೆಗೆ ಅವರು ಕಂಡಿತವಾಗಿಯೂ ರಾಜಕೀಯದಲ್ಲಿ ಇರಬೇಕು ಎಂದರು.

ಅವರಿಗೆ ಭಗವಂತಹ ಒಳ್ಳೆಯ ಬುದ್ಧಿಕೊಡಲಿ. ಅವರ ಹಿರಿತನ, ರಾಜಕೀಯ ಅನುಭವ, ಅವರ ಸುದೀರ್ಘ ರಾಜಕಾರಣವನ್ನು ಗೌರವಿಸುತ್ತೇನೆ. ಅವರು ಮಂತ್ರಿ ಪದವಿ ಕಳೆದುಕೊಂಡಾಗ ಮೊದಲವನಾಗಿ ನಾನೇ ಅವರಿಗೆ ಸಾಂತ್ವನ ಹೇಳಿದ್ದೇನೆ. ರಾಜಕಾರಣದಲ್ಲಿ ಅಧಿಕಾರ ಬರುತ್ತೆ, ಹೋಗುತ್ತೆ ಎಂದಿದ್ದೆ. ಆದರೆ, ಅವರ ಮಂತ್ರಿ ಸ್ಥಾನ ಯಾವ ಕಾರಣಕ್ಕೆ ಹೋಯಿತು ಅಂತಾ ಇವತ್ತಿನವರೆಗೂ ನನಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಸೊರಕೆ ಆಡಳಿತ ವ್ಯವಸ್ಥೆ, ಪೊಲೀಸ್ ಠಾಣೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನನ್ನ ಮಾತು ಕೇಳದಿದ್ದರೆ ನಿನನ್ನು ಟ್ರಾನ್ಸ್ ಫಾರ್ ಮಾಡುತ್ತೇನೆಂದು ಸರಕಾರಿ ಅಧಿಕಾರಿ, ನೌಕರರನ್ನು ಬೆದರಿಸುತ್ತಿದ್ದಾರೆ. ಇದು ಒಳ್ಳೆದಲ್ಲ. ಸರಕಾರ ಬರುತ್ತೆ, ಹೋಗುತ್ತೆ‌. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಕಳಂಕ ಎಂದು ಅವರು ಕಿಡಿಕಾರಿದರು.

ಭಜನೆ ಕುಣಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಹಾತ್ಮಗಾಂಧೀಜಿ ಅವರು “ರಘುಪತಿ ರಾಘವ ರಾಜಾ ರಾಮ್” ಭಜನೆ ಹಾಡುತ್ತಾ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವುದನ್ನು ಇಡೀ ದೇಶದ ಜನತೆ ಸ್ಮರಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದಿಗೂ ಪಾದಯಾತ್ರೆ, ಪ್ರತಿಭಟನೆ ಮಾಡುವಂತಹ ಸಂದರ್ಭದಲ್ಲಿ ಕುಣಿತಾರೆ, ಡ್ಯಾನ್ಸ್ ಮಾಡ್ತಾರೆ. ಇದಕ್ಕೆ ಸೊರಕೆ ಅವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚಳುವಳಿ, ಹರತಾಳ ಇದ್ದಂತಹ ಸಂದರ್ಭದಲ್ಲಿ ಭಜನೆ, ಕುಣಿತ ಎನ್ನುವುದು ಸರ್ವೇಸಾಮಾನ್ಯ. ಆರೋಪ ಮಾಡಲು ಯಾವುದೇ ವಿಷಯ ಸಿಗದಿದ್ದಾಗ ಇಂತಹ ಸಣ್ಣ ಸಣ್ಣ ವಿಚಾರಗಳನ್ನು ಮಹಾ ತಪ್ಪು ಎಂಬ ರೀತಿಯಲ್ಲಿ ಸೊರಕೆ ಬಿಂಬಿಸುತ್ತಿದ್ದಾರೆ. ನಾನು ಯಾವುದೇ ಅಕ್ರಮ ವ್ಯವಹಾರಗಳನ್ನು ನಡೆಸುತ್ತಿಲ್ಲ. 40 ವರ್ಷಗಳಿಂದ ಕಾನೂನು ಬದ್ಧವಾಗಿ ವ್ಯವಹಾರ ಮಾಡಿಕೊಂಡು ಬರುತ್ತಿದ್ದೇನೆ. ಇಷ್ಟರವರೆಗೆ ನನ್ನ ಬದುಕಿನಲ್ಲಿ ಪಕ್ಷ, ಜಾತಿ, ಧರ್ಮ, ಮೇಲು, ಕೀಳು ಎಂಬ ಬೇಧವಾವ ಮಾಡದೆ ಜನರ ಸಂಕಷ್ಟವನ್ನು ಪರಿಹಾರ ಮಾಡುವ ಕೆಲಸ ಮಾಡಿದ್ದೇನೆ. ಆದರೆ ಇವರ ವ್ಯವಹಾರ ಏನು. ಬದುಕಿಗೆ ಇವರು‌ ಏನು ಮಾಡಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಸೊರಕೆ ಸರಕಾರದಲ್ಲಿ ಆರ್ಥಿಕ‌ ಸಮಸ್ಯೆ ಇಲ್ಲ ಅಂತಾರೆ. ಆದರೆ, ಸಿಎಂ ಆರ್ಥಿಕ‌ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಸರಕಾರದ ಆರ್ಥಿಕ ವ್ಯವಸ್ಥೆ ಸರಿಯಿಲ್ಲ. ನಮಗೆ ಯಾರಿಗೂ ಅನುದಾನ ಬರುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ನನಗೆ ಪರಿಚಯವಿರುವ ತುಂಬಾ ಜನ ಶಾಸಕರು ಕೂಡ ನಮಗೆ ಅನುದಾನ ಬರುತ್ತಿಲ್ಲ ಎನ್ನುತ್ತಿದ್ದಾರೆ‌ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಪಕ್ಷದ ಮುಖಂಡರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಸುವರ್ಣ, ಗೋಪಾಲಕೃಷ್ಣ ರಾವ್, ಶರಣ್ ಕುಮಾರ್ ಮಟ್ಟು, ಅನಿಲ್ ಕುಮಾರ್ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here