ಉಡುಪಿ: ಶಂಕರಪುರದ ಸಾಲ್ಮರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ನ ಕೃಷ್ಣವೇಣಿ ಆಶ್ರಯಧಾಮ ಹಾಗೂ ಕೃಷ್ಣವೇಣಿ ಆರ್ಯುವೇದ ಆಸ್ಪತ್ರೆಯನ್ನು ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಬಳಿಕ ಆಶೀರ್ಚನ ನೀಡಿದ ಶ್ರೀಗಳು, ಆರ್ಯುವೇದ ಪದ್ದತಿ ನಮ್ಮ ದೇಶದ ಶ್ರೇಷ್ಠ ಔಷಧೀಯ ಪದ್ದತಿಯಾಗಿದ್ದು, ಇದು ವೈಜ್ಞಾನಿಕ ತಳಹದಿಯಿಂದ ಕೂಡಿದೆ. ಇದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದರು.
ಇಂದು ಹಿರಿಯರಿಗೆ ಮನೆಯಲ್ಲೇ ಎಲ್ಲ ಸೌಕರ್ಯಗಳನ್ನು ಪೂರೈಸಲು ಆಗುತ್ತಿಲ್ಲ. ಹೀಗಾಗಿ ಇಂತಹ ಆಶ್ರಯಧಾಮಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ. ಇದು ಪಾಶ್ಚಿಮಾತ್ಯ ಸಂಸ್ಕೃತಿಯಾಗಿದ್ದರೂ ಇಂದು ನಮಗೂ ಅನಿವಾರ್ಯವಾಗಿದೆ. ಸಮಾಜ ಸೇವೆಯೂ ದೇವರ ಸೇವೆಯೇ ಆಗಿದೆ ಎಂದು ಹೇಳಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ,
60 ವರ್ಷಗಳ ಬಳಿಕ ಉದ್ಯೋಗ ನಿವೃತ್ತಿಯಾದ ಅನಂತರ ನಮ್ಮ ಜೀವನ ಕೊನೆಯ ಭಾಗ ಅನ್ಕೊಂಡು ಬಿಡುತ್ತೇವೆ. ಆದರೆ ನಮ್ಮ ಮನಸ್ಸಿನ ಹುಮ್ಮಸ್ಸು ಚೈತನ್ಯತೆ ನಮ್ಮ ಚಟುವಟಿಗಳನ್ನು ಹೆಚ್ಚಿಸುತ್ತೆ. ಕೋಟ ಶಿವರಾಮ ಕಾರಂತರು ತೊಂಬತ್ತನೇ ವಯಸ್ಸಿನಲ್ಲಿ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುವುದನ್ನೂ ನಾನು ನೋಡಿದ್ದೆ. ನಮಗೆ ಸಮಸ್ಯೆ ಅದಾಗ ಅದನ್ನು ಎದುರಿಸುವಂತ ಚೈತನ್ಯ ತುಂಬುವಂಥ ಸಂಸ್ಥೆಗಳು ಬೇಕು. ಎಪ್ಪತ್ತೈದು ದಾಟಿದ ನಂತರ ಸಾಧನೆ ಮಾಡಿದವರು ಬೇಕಾದಷ್ಟು ಜನ ಇದ್ದಾರೆ. ಇಂಥ ಸಂಸ್ಥೆಯನ್ನು ಹುಟ್ಟುಹಾಕಿದ ಗೋವಿಂದ ಭಟ್ ಫ್ಯಾಮಿಲಿ ಅತ್ಯುತ್ತಮವಾದ ಕೆಲಸ ಮಾಡಿದ್ದಾರೆ ಎಂದರು.
ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಹರಿದಾಸ ಭಟ್ ಮಾತನಾಡಿ, ನಮಗೆ ಈ ಸಂಸ್ಥೆಯಲ್ಲಿ ಯಾವುದೇ ಲಾಭದ ಯೋಚನೆ ಇಲ್ಲ. ನಮ್ಮ ಅಜ್ಜನ ಜಾಗ ಸಾಮಾಜಿಕವಾಗಿ ನಡೆಸಬೇಕು ಎಂಬ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿದೆ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ನಿಟ್ಟೆ ಕಾಲೇಜಿನ ಪ್ರಾಂಶುಪಾಲರಾದ ನಿರಂಜನ ಚಿಪ್ಲೂಣ್ಕರ್, ಮಾಜಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಪದ್ಮನಾಭ ಭಟ್, ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಟಪಾಡಿ ಗ್ರಾ.ಪಂ ಅಧ್ಯಕ್ಷೆ ಪ್ರಭಾ ಶೆಟ್ಟಿ,
ಕರ್ಕಾಲು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು.
ಟ್ರಸ್ಟ್ ನ ಸದಸ್ಯರಾದ ಶಶಿಧರ ತಂತ್ರಿ ಸ್ವಾಗತಿಸಿ, ವ್ಯವಸ್ಥಾಪಕರಾದ ರಮೇಶ್ ಮಿತ್ತಂತಾಯ ಕಾರ್ಯಕ್ರಮ ನಿರೂಪಿಸಿದರು. ಪದ್ಮನಾಭ ಭಟ್ ವಂದಿಸಿದರು.