ಉಡುಪಿ: ಈ ಬಾರಿಯ ರಾಷ್ಟ್ರೀಯ ಕೈಮಗ್ಗ ದಿನಾಚರಣೆ -ಕೈಮಗ್ಗ ಸೀರೆಗಳ ಉತ್ಸವವನ್ನು ಉಡುಪಿ ಪರ್ಯಾಯ ಪುತ್ತಿಗೆ ಶ್ರೀಗಳ ನೇತೃತ್ವದಲ್ಲಿ ಆಗಸ್ಟ್ 4 ರಿಂದ 11ನೇ ತಾರೀಕವರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವಗಳೊಂದಿಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಎಂಟು ದಿನಗಳ ಕಾಲ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷರಾದ ರತ್ನಾಕರ್ ಇಂದ್ರಾಳಿಯವರು ಮಾಹಿತಿ ನೀಡಿದರು.
ಅವರು ಉಡುಪಿ ಕಿನ್ನಿಮೂಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಕಲಾಮಂದಿರದಲ್ಲಿ ಆಯೋಜಿಸಿದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ-2024 ಇದರ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿದಿನ ಸಾಯಂಕಾಲ ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ನಾಡಿನ ಪ್ರಖ್ಯಾತ ಸಂಪನ್ಮೂಲ ವ್ಯಕ್ತಿಗಳಾದ ಚಕ್ರವರ್ತಿ ಸೂಲಿಬೆಲೆ, ಹಿರೇಮಗಳೂರು ಕಣ್ಣನ್, ಉಡುಪಿಯ ಮಾಜಿ ಎಸ್ ಪಿ ಅಣ್ಣಾಮಲೈ, ಪತ್ರಕರ್ತ ಅಜಿತ್ ಹನುಮನಕ್ಕನವರ್, ಅಕ್ಷಯ ಗೋಖಲೆ, ಮುಂತಾದವರಿಂದ ಶಿಖರೋಪನ್ಯಾಸ ನಡೆಯಲಿದೆ. ಕಳೆದ ಬಾರಿಯಂತೆ ಸೌಂದರ್ಯ ಸ್ಪರ್ಧೆಗಳು ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗುತ್ತದೆ. ನಾಡಿನ ವಿವಿಧ ತಂಡಗಳಿಂದ ಕುಳಿತು ಹಾಗೂ ಕುಣಿದು ಭಜನಾ ಕಾರ್ಯಕ್ರಮಗಳು ಪ್ರತಿದಿನ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನಡೆಯಲಿದೆ. ರಾಷ್ಟ್ರದ ವಿವಿಧ ಭಾಗಗಳಿಂದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ರಾಜಾಂಗಣದದಲ್ಲಿ ನೆಲೆಯೂರಲಿದೆ. ಆಹ್ವಾನಿತ ತಂಡಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಸ್ಪರ್ದಾ ಹಾಗು ಪ್ರದರ್ಶನ ರೂಪಕವಾಗಿ ನಿರಂತರವಾಗಿ ಹಮ್ಮಿ ಕೊಳ್ಳಲಾಗುವುದು.
ಉದ್ಘಾಟನಾ ಸಮಾರಂಭ ಹಾಗು ಸಭಾ ಕಾರ್ಯಕ್ರಮಗಳಲ್ಲಿ ಮಠಾಧೀಶರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಚಿವರುಗಳು, ಉಡುಪಿಯ ಸಂಸದರು ಮತ್ತು ಶಾಸಕರುಗಳು, ಉಡುಪಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಸಹಕಾರಿ ಇಲಾಖೆಯ ಅಧಿಕಾರಿಗಳು, ಸಿನಿಮಾ ರಂಗದ ತಾರೆಯರು, ನೇಕಾರ ಸಮಾಜದ ಪ್ರಮುಖರು ಭಾಗವಹಿಸಲಿರುವರು.
ಸಮಾಜದ ಹದಿನಾರು ದೇವಸ್ಥಾನಗಳ ಆಡಳಿತ ಪ್ರಮುಖರು ಈ ಕಾರ್ಯಕ್ರಮಗಳ ಮಹಾಪೋಷಕರಾಗಿ ಉಪಸ್ಥಿತರಿರಲಿದ್ದಾರೆ.
ಪ್ರತಿಷ್ಠಾನದ ಗೌರವ ಸಲಹೆಗಾರರಾದ ವಿಶ್ವನಾಥ್ ಶೆಟ್ಟಿಗಾರ್ ದೇರೆಬೈಲ್, ಪ್ರೇಮಾನಂದ ಶೆಟ್ಟಿಗಾರ್, ದೇವರಾಯ ಶೆಟ್ಟಿಗಾರ್, ವಿವಿಧ ದೇವಸ್ಥಾನಗಳ ಆಡಳಿತ ಪ್ರಮುಖರಾದ ಪ್ರಭಾಶಂಕರ್ ಪದ್ಮಶಾಲಿ, ಜ್ಯೋತಿಪ್ರಸಾದ್ ಶೆಟ್ಟಿಗಾರ್, ಬಾಲಕೃಷ್ಣ ಕಲ್ಪಾವಿ, ಉಡುಪಿಯ ನೇತ್ರತಜ್ಞ ಡಾ.ಚಂದನ್ ಶೆಟ್ಟಿಗಾರ್, ಪ್ರತಿಷ್ಠಾನದ ಉಪಾಧ್ಯಕ್ಷರಾದ ಸರೋಜಾ ಶೆಟ್ಟಿಗಾರ್, ಸದಾಶಿವ ಶೆಟ್ಟಿಗಾರ್ ಉಪಸ್ಥಿತರಿದ್ದರು. ಕಳೆದ ವರ್ಷದ ಆಯೋಜನ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಮಣಿಪಾಲ್ ಸ್ವಾಗತಿಸಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನರೇಂದ್ರ ಶೆಟ್ಟಿಗಾರ ಹೆರ್ಗ ವಂದಿಸಿದರು. ಸದಾಶಿವ ಗೋಳಿಜೋರಾ ಕಾರ್ಯಕ್ರಮ ನಿರೂಪಿಸಿದರು