ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಆರು ವರ್ಷಗಳ ಕಾಲ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಆದೇಶಿಸಿದ್ದಾರೆ.
ಕರ್ನಾಟಕದಲ್ಲಿ ಪ್ರಜ್ವಲ್ ರೇವಣ್ಣ ಅವರ ವಿವಾದ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೆ ಜಾತ್ಯತೀತ ಜನತಾದಳವು ಈ ಕ್ರಮ ಕೈಗೊಂಡಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ವಿವಾದ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜಾ.ದಳ ಮೈತ್ರಿಗೆ ಹಿನ್ನಡೆಯಾಗಬಹುದು ಎನ್ನುವ ಆತಂಕದ ನಡುವೆಯೇ ಇನ್ನಷ್ಟು ಅನಾಹುತ ನಿಯಂತ್ರಿಸಲು ತುರ್ತು ಆದೇಶವನ್ನು ಮಾಜಿ ಪ್ರಧಾನಿ ದೇವೇಗೌಡ ಅವರು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ಗುರುಮಿಠ್ಕಲ್ ಶಾಸಕ ಶರಣಗೌಡ ಕಂದಕೂರ ಅವರು ಸೇರಿದಂತೆ ಅನೇಕ ಮುಖಂಡರು ಪ್ರಜ್ವಲ್ ರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿದ್ದರು.