ಉಡುಪಿ: ವನಸುಮ ವೇದಿಕೆ ಕಟಪಾಡಿ ಇದರ ವತಿಯಿಂದ ಮೂರು ದಿನಗಳ ‘ರಂಗೋತ್ಸವ-2024’ ಇದೇ ಮಾರ್ಚ್ 23ರಿಂದ 25ರ ವರೆಗೆ ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ವನಸುಮ ವೇದಿಕೆಯ ಅಧ್ಯಕ್ಷ ಬಾಸುಮ ಕೊಡಗು ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 23ರಂದು ಸಂಜೆ 6.45ಕ್ಕೆ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಅವರು ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಅಂದು ಹಿರಿಯ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಅವರಿಗೆ ವನಸುಮ ರಂಗ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿವುದು. ಬಳಿಕ ವನಸುಮ ವೇದಿಕೆ ತಂಡದಿಂದ “ಸುಳಿಯಲ್ಲಿ ಸಿಕ್ಕವರು” ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಮಾರ್ಚ್ 24ರಂದು ಸಂಜೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಂದು ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ತೇಜಸ್ವಿನಿ ಉದಯಕುಮಾರ್ ಅವರಿಗೆ “ವನಸುಮ ಸಾಧನಾಸಿರಿ” ಪುರಸ್ಕಾರ ನೀಡಲಾಗುವುದು. ಬಳಿಕ ಶಾಸ್ತ್ರೀಯ ಯಕ್ಷಮೇಳ ಉಡುಪಿ ಇವರಿಂದ ‘ಋತುಪರ್ಣ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಮಾರ್ಚ್ 25ರಂದು ಮುಂಬೈ ಕರ್ನಾಟಕ ಸಂಘದ ಅಧ್ಯಕ್ಷ ಡಾ. ಭರತ್‌ಕುಮಾರ್ ಪೊಲಿಪು ಸಮಾರೋಪ ಭಾಷಣ ಮಾಡಲಿದ್ದಾರೆ. ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಅವರಿಗೆ “ವನಸುಮ ರಂಗಪುರಸ್ಕಾರ್” ಪ್ರದಾನ ಮಾಡಲಾಗುವುದು. ನಂತರ ಬೆಂಗಳೂರು ರಂಗದರ್ಶನ ತಂಡದವರಿಂದ “ಸ್ವಪ್ನಸಿದ್ಧಿ” ನಾಟಕ ಪ್ರದರ್ಶನ ನಡೆಯಲಿದೆ ಎಂದು ಬಾಸುಮ ಕೊಡಗು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ವಿನಯ್ ಆಚಾರ್ಯ, ಕೋಶಾಧಿಕಾರಿ ಕಾವ್ಯವಾಣಿ ಕೊಡಗು, ಸದಸ್ಯರಾದ ಯು.ಕೆ. ಭಾಸ್ಕರ್, ರಾಜ್ ಗೋಪಾಲ್ ಶೇಟ್ ಉಪಸ್ಥಿತರಿದ್ದರು.