ಉಡುಪಿ: ತುಳುಕೂಟ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ, ಲಯನ್ಸ್ ಕ್ಲಬ್ ಉಡುಪಿ ಅಮೃತ್ ಆಶ್ರಯದಲ್ಲಿ ‘ತುಳುವೆರೆ ಗೊಬ್ಬುಲು 2024’ ತುಳುನಾಡಿನ ಗ್ರಾಮೀಣ ಕ್ರೀಡೆಗಳ ಸ್ಪರ್ಧಾಕೂಟ ಇದೇ ಫೆ. 25ರಂದು ಬೆಳಿಗ್ಗೆ 9 ಗಂಟೆಗೆ ಉಡುಪಿ ಕ್ರಿಶ್ಚಿಯನ್ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತುಳುಕೂಟದ ಉಪಾಧ್ಯಕ್ಷ ಭುವನಪ್ರಸಾದ್ ಹೆಗ್ಡೆ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9ಗಂಟೆಗೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ವಿ.ಕೆ.ಡೆವಲಪರ್ಸ್ ಮುಖ್ಯಸ್ಥ ಕರುಣಾಕರ ಎಂ.ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಷನ್ ಕುಮಾರ್ ಶೆಟ್ಟಿ, ಎಚ್.ಪಿ.ಆರ್.ಗ್ರೂಪ್ ಅಪ್ ಇನ್ಸಿಟ್ಯೂಷನ್ಸ್ ಉಡುಪಿ ಇದರ ಅಧ್ಯಕ್ಷ ಹರಿಪ್ರಸಾದ್ ರೈ, ಸಫಲ್ಯ ಟ್ರಸ್ಟ್ ನ ಪ್ರವರ್ತಕ ನಿರುಪಮಾ ಪ್ರಸಾದ್ ಶೆಟ್ಟಿ, ವಿಜಯಾ ಸೋಲಾರ್ ನ ಕೆ.ಸತ್ಯೇಂದ್ರ ಪೈ, ಉಡುಪಿ ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಭಾರತಿ ಹರೀಶ್ ಸುವರ್ಣ, ಉಡುಪಿ ಕ್ರಿಶ್ಚಿಯನ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಜ್ಯೋಯಿಲಿನ್ ಪರಿಮಳ ಕರ್ಕಡ ಭಾಗವಹಿಸಲಿದ್ದಾರೆ ಎಂದರು.
ಅಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮತ್ಸೋದ್ಯಮಿ ಸಾಧು ಸಾಲ್ಯಾನ್, ಸಮಾಜ ಸೇವಕ ವಿಶ್ವನಾಥ್ ಶೆಣೈ, ಉಡುಪಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ಸುಮಾ ಎಸ್., ಉಡುಪಿ ಕ್ರಿಶ್ಚಿಯನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಹೆಲೆನ್ ಬಿ.ಸಾಲಿನ್ಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ತುಳುಕೂಟದ ಸ್ಪರ್ಧಾ ಸಂಚಾಲಕ ಮಹಮ್ಮದ್ ಮೌಲಾ ಮಾತನಾಡಿ, ಗುಂಪು ಸ್ಪರ್ಧೆಯಲ್ಲಿ ಹುಡುಗರಿಗೆ ಲಗೋರಿ (ತಂಡದಲ್ಲಿ 7 ಮಂದಿ), ಹ್ಗಜಗ್ಗಾಟ (ಗರಿಷ್ಠ 10 ಮಂದಿ), ಗೇರುಬೀಜದಾಟ (ಗರಿಷ್ಠ 5 ಮಂದಿ) ಸ್ಪರ್ಧೆಗಳಿದ್ದರೆ, ಹುಡುಗಿಯರಿಗೆ ಸೊಪ್ಪಾಟ (ಗರಿಷ್ಠ 7ಮಂದಿ), ಹ್ಗಜಗ್ಗಾಟ (10 ಮಂದಿ), ಗೇರುಜೀವದಾಟ (5ಮಂದಿ)ಗಳಿವೆ.
ವೈಯಕ್ತಿಕ ವಿಭಾಗದಲ್ಲಿ ಹುಡುಗರಿಗೆ ಗುಂಟುದ ಗೊಬ್ಬು (ಗುಂಟಾಟ), ಕರದರ್ಪುನಿ(ಮಡಕೆ ಒಡೆಯುವುದು), ತಾರಾಯಿದ ಕಟ್ಟ (ತೆಂಗಿನಕಾಯಿ ಅಂಕ), ಹುಡುಗಿಯರಿಗೆ ಗುಂಟದ ಗೊಬ್ಬು, ಕರದರ್ಪುನಿ ಹಾಗೂ ಮಡಲ್ ಮುಡೆವುನಿ (ತೆಂಗಿನಗರಿ ಹಣೆಯುವುದು) ಸ್ಪರ್ಧೆಗಳಿರುತ್ತವೆ.
ಸಾರ್ವಜನಿಕರಿಗೆ ಹಾಗೂ ತುಳುಕೂಟದ ಸದಸ್ಯರಿಗೆ ತಾರಾಯಿದ ಕಟ್ಟ (ಪುರುಷರಿಗೆ), ಕರದರ್ಪುನಿ (ಮಹಿಳೆಯರಿಗೆ), ಕೊಪ್ಪರಿಗೆ ನಾಡುವ ಗೊಬ್ಬು (ನಿಧಿ ಶೋಧ) ಹಾಗೂ ಸಬಿ ಸವಾಲ್ (ತುಳು ರಸಪ್ರಶ್ನೆ-ಕ್ವಿಝ್) ಸ್ಪರ್ಧೆಗಳಿರುತ್ತವೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಆಸಕ್ತರು ದೂರವಾಣಿ ಸಂಖ್ಯೆ:9845608466 (ಮಹಮ್ಮದ್ ಮೌಲಾ) ಅಥವಾ 9036483463 (ಯಶೋಧ ಕೇಶವ್) ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ದಿವಾಕರ ಸನಿಲ್, ಮಾಧ್ಯಮ ವಕ್ತಾರೆ ಭಾರತಿ ಟಿ.ಕೆ. ಹಾಗೂ ಯಶೋಧ ಕೇಶವ್ ಉಪಸ್ಥಿತರಿದ್ದರು.