ಉಡುಪಿ: ಯಕ್ಷಗಾನ ಕಲಾರಂಗ ನಡೆಸುವ ವಿದ್ಯಾಪೋಷಕ್ ಯೋಜನೆಯ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಕಟ್ಟಿಸಿ ಕೊಡಲಾದ 50ನೇ ಮನೆಯ ಉದ್ಘಾಟನೆ ಸಮಾರಂಭವು ಫೆ.14ರಂದು ಕಾರ್ಕಳದ ನೂರಾಲ್‌ಬೆಟ್ಟುವಿನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮುರಳಿ ಕಡೆಕಾರ್ ತಿಳಿಸಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾಪೋಷಕ್ ಫಲಾನುಭವಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಾರ್ಕಳ ನೂರಾಲ್‌ಬೆಟ್ಟುವಿನ ಚೈತ್ರಾ ಅವರಿಗೆ ಮನೆ ಸಮರ್ಪಿಸಲಾಗುತ್ತಿದೆ ಎಂದರು.
ದಾನಿಗಳಾದ ನಿವೃತ್ತ ಶಿಕ್ಷಕ ಯು.ಎಸ್. ರಾಜಗೋಪಾಲಾಚಾರ್ಯ ಮತ್ತು ಸುಶೀಲಾ ಆರ್. ಆಚಾರ್ಯ ತಮ್ಮ ವೈವಾಹಿಕ ಜೀವನದ 50 ವರ್ಷಾಚರಣೆಯ ಸವಿನೆನಪಿನಲ್ಲಿ ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ಈ ಹಂಚಿನ ಮನೆಯನ್ನು ನಿರ್ಮಿಸಿಕೊಡುತ್ತಿದ್ದಾರೆ ಎಂದು ತಿಳಿಸಿದರು.
ಸೋದೆ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಉದ್ಘಾಟನೆ ನೆರವೇರಿಸಲಿದ್ದು, ದಾನಿಗಳಾದ ಯು.ಎಸ್.ರಾಜಗೋಪಾಲಾ ಚಾರ್ಯ ಮತ್ತು ಸುಶೀಲಾ ಆರ್. ಆಚಾರ್ಯ, ಅತಿಥಿಗಳಾಗಿ ವೇಣುಗೋಪಾಲ ಭಟ್ ಬೆಂಗಳೂರು, ಭಾಗ್ಯಲಕ್ಷ್ಮೀ ಪ್ರಸಾದ್ ರಾವ್, ಲೀಲಾ ಯೋಗೀಶ್ ರಾವ್, ಪ್ರಸನ್ನ ಯು.ಆರ್. ಬೆಂಗಳೂರು, ಅಶ್ವಿನಿ ಪ್ರಸನ್ನ ಬೆಂಗಳೂರು ಹಾಗೂ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಉಪಸ್ಥಿತರಿರುವರು. ಸುದ್ದಿಗೋಷ್ಠಿಯಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ, ಖಜಾಂಚಿ ಸದಾಶಿವ ರಾವ್, ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು