Saturday, November 23, 2024

ಮಣಿಪಾಲ: ರಕ್ತದ ಕಾಂಡಕೋಶ ದಾನದ ಬಗ್ಗೆ ಜಾಗೃತಿ ಮೂಡಿಸಲು ಮಣಿಪಾಲ್ ಮ್ಯಾರಥಾನ್ ಜೊತೆಗೆ ಡಿಕೆಎಂಎಸ್-ಬಿಎಂಎಸ್‌ಟಿ ಸಹಭಾಗಿತ್ವ

Must read

ಉಡುಪಿ: ರಕ್ತದ ಕ್ಯಾನ್ಸರ್ ಮತ್ತು ರಕ್ತದ ಕಾಂಡಕೋಶ (ಬ್ಲಡ್ ಸ್ಟೆಮ್ ಸೆಲ್) ದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆ ಡಿಕೆಎಂಎಸ್ ಬಿಎಂಎಸ್‌ಟಿ ಫೌಂಡೇಶನ್ ಇಂಡಿಯಾ, ಮಣಿಪಾಲ್ ಮ್ಯಾರಥಾನ್ 2024ರ ಜೊತೆಗೆ ಕೈಜೋಡಿಸಿದೆ.

ಮ್ಯಾರಥಾನ್‌ನಲ್ಲಿ ಸುಮಾರು ಹತ್ತು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಜೀವ ಉಳಿಸುವ ರಕ್ತಕಾಂಡ ಕೋಶದ ದಾನಿಗಳನ್ನು ನೋಂದಣಿ ಮಾಡಿಕೊಳ್ಳುವ ಗುರಿಯನ್ನು ಸಂಸ್ಥೆಯು ಹೊಂದಿದೆ.

ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್‌ನ ಸಹಭಾಗಿತ್ವದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ್ ಮ್ಯಾರಥಾನ್ ಆಯೋಜಿಸಿದೆ. ಮ್ಯಾರಥಾನ್‌ನ 6ನೇ ಆವೃತ್ತಿಗೆ “ವಿ ಆರ್ ವಿತ್ ಯು ಆಲ್ ದಿ ವೇ” ಎಂಬ ಟ್ಯಾಗ್‌ಲೈನ್ ನೀಡಲಾಗಿದ್ದು, ರಕ್ತದ ಕ್ಯಾನ್ಸರ್‌ನಂತಹ ರೋಗಗಳ ವಿರುದ್ಧ ಜಾಗೃತಿಯನ್ನು ಮೂಡಿಸುವ ಉದ್ದೇಶ ಹೊಂದಿದೆ.

ಈ ಹಿನ್ನೆಲೆಯಲ್ಲಿ ಮಾತನಾಡಿದ ಡಿಕೆಎಂಎಸ್ ಬಿಎಂಎಸ್‌ಟಿ ಫೌಂಡೇಶನ್ ಇಂಡಿಯಾದ ಸಿಇಒ ಪ್ಯಾಟ್ರಿಕ್ ಪೌಲ್ ಅವರು, ಭಾರತದಲ್ಲಿ ಸ್ಟೆಮ್ ಸೆಲ್ ದಾನಿಗಳ ಕೊರತೆಯನ್ನು ಪರಿಹರಿಸುವ ಅಗತ್ಯವಿದೆ ಎಂದು ಹೇಳಿದರು. “ಭಾರತದಲ್ಲಿ, ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಜನರು ರಕ್ತದ ಕ್ಯಾನ್ಸರ್‌ ಅಥವಾ ತತ್ಸಂಬಂಧಿ ಕಾಯಿಲೆಗೆ ಗುರಿಯಾಗುತ್ತಿದ್ದಾರೆ. ಅವರಿಗೆ ಯಶಸ್ವಿಯಾಗಿ ರಕ್ತದ ಸ್ಟೆಮ್ ಸೆಲ್ ಕಸಿ ಮಾಡಿಸಿಕೊಳ್ಳಲು ಸರಿಯಾದ ಎಚ್‌ಎಲ್‌ಎ ಹೊಂದಾಣಿಕೆಯಾಗುವ ದಾನಿ ಬೇಕಾಗುತ್ತದೆ. ದುರಾದೃಷ್ಟವಶಾತ್, ಕೇವಲ ಶೇ 0.03ರಷ್ಟು ಭಾರತೀಯರು ಮಾತ್ರ ರಕ್ತದ ಕಾಂಡಕೋಶದ ದಾನಿಗಳಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಭಾರತೀಯ ಮೂಲದ ರೋಗಿಗಳು ಮತ್ತು ದಾನಿಗಳಿಗೆ ವಿಶಿಷ್ಟವಾದ ಎಚ್‌ಎಲ್‌ಎ ಅಂದರೆ ಹ್ಯೂಮನ್ ಲ್ಯೂಕೊಸೈಟ್ ಆಂಟಿಜೆನ್ ಇದೆ. ಇದು ಜಾಗತಿಕ ಡೇಟಾಬೇಸ್‌ನಲ್ಲಿ ಅಷ್ಟೇನೂ ಪ್ರಮುಖವಾಗಿ ಸಿಗುವುದಿಲ್ಲ. ಹಾಗಾಗಿ ಸೂಕ್ತವಾದ ದಾನಿಯನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ. ಭಾರತ ಯುವ ದೇಶವಾಗಿದ್ದು, ರಕ್ತದ ಕಾಂಡಕೋಶ ದಾನದ ಬಗ್ಗೆ ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ” ಎಂದು ಅವರು ಹೇಳಿದರು.

ಮಣಿಪಾಲ್ ಅಕಾಡೆಮಿ ಆಪ್ ಹೈಯರ್ ಎಜುಕೇಶನ್ ಪ್ರೊ. ಚಾನ್ಸಲರ್ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ “ಈ ಬಾರಿಯ ಮಣಿಪಾಲ್ ಮ್ಯಾರಥಾನ್‌ಗೆ ಡಿಕೆಎಂಎಸ್ ಬಿಎಂಎಸ್‌ಟಿ ಫೌಂಡೇಶನ್ ಇಂಡಿಯಾ ಕೈ ಜೋಡಿಸಿದೆ. ಮ್ಯಾರಥಾನ್‌ನಲ್ಲಿ ರಕ್ತದ ಕಾಂಡಕೋಶದ ದಾನದ ಬಗ್ಗೆ ಮತ್ತು ರಕ್ತದ ಕ್ಯಾನ್ಸರ್ ಮತ್ತು ತತ್ಸಂಬಂಧಿತ ತಲಸ್ಸೇಮಿಯಾ ಇತ್ಯಾದಿ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ಸರಳ ಪ್ರಕ್ರಿಯೆಯ ಬಗ್ಗೆ ಇರುವ ಮಿಥ್ಯೆಗಳನ್ನು ನಿವಾರಿಸುವ ಗುರಿಯನ್ನು ನಾವು ಹಾಕಿಕೊಂಡಿದ್ದೇವೆ. ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವ ಯುವಕರು ಸಂಭವನೀಯ ರಕ್ತಕಾಂಡ ಕೋಶದ ದಾನಿಗಳಾಗಿ ನೋಂದಣಿ ಮಾಡಿಕೊಳ್ಳಬಹುದು ಎಂಬ ಆಶಯ ನಮ್ಮದು” ಎಂದು ಹೇಳಿದರು.

ರೋಗಿಗಳನ್ನು ರಕ್ಷಿಸಲು ತನ್ನ ರಕ್ತದ ಕಾಂಡಕೋಶಗಳನ್ನು ದಾನ ಮಾಡಿರುವ ದಾನಿ ಮತ್ತು ಉಡುಪಿಯ ಮಾರ್ಕೆಟಿಂಗ್ ಉದ್ಯೋಗಿ ಅಕ್ಷಯ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು.
ರಕ್ತದ ಕಾಂಡಕೋಶ ದಾನದ ಬಗ್ಗೆ ಕೆಲವು ಮಿಥ್ಯೆಗಳಿವೆ. ಈ ಪ್ರಕ್ರಿಯೆಯಲ್ಲಿ ದವಡೆಯ ಸ್ವಾಬ್‌ ಮಾದರಿಗಳನ್ನು ನೀಡುವ ಸರಳ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ದಾನಿಯಾಗಿ ನೋಂದಣಿ ಮಾಡಿಕೊಂಡರೆ ಸಾಕು. ಹೊಸ ತಲೆಮಾರು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟು, ಜೀವಗಳನ್ನು ಉಳಿಸುವ ಭರವಸೆಯ ಆಶಾಕಿರಣವಾಗಿ ದಾನವನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ. ರಕ್ತದ ಕ್ಯಾನ್ಸರ್ ವಿರುದ್ಧದ ಈ ಹೋರಾಟದಲ್ಲಿ ಇದು ಆರೋಗ್ಯಕರ ಹೆಜ್ಜೆಯಾಗಲಿದೆ” ಎಂದು ಅವರು ಹೇಳಿದರು.

ಭಾರತದಲ್ಲಿ ಪ್ರತಿ ಐದು ನಿಮಿಷಗಳಿಗೊಮ್ಮೆ ಒಬ್ಬರಿಗೆ ರಕ್ತದ ಕ್ಯಾನ್ಸರ್ ಅಥವಾ ತಲಸ್ಸೇಮಿಯಾ ಅಥವಾ ಅಪ್ಲಾಸ್ಟಿಕ್ ಅನೀಮಿಯಾದಂತಹ ರಕ್ತದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವ ವರದಿಯಾಗುತ್ತಿದೆ. ಇವರಲ್ಲಿ ಬಹುಪಾಲು ಮಂದಿ ಮಕ್ಕಳು ಮತ್ತು ಯುವಕರು. ರಕ್ತದ ಕಾಂಡಕೋಶದ ಕಸಿಯಿಂದಲೇ ಚೇತರಿಸಿಕೊಳ್ಳುವ ಅವಕಾಶ ಅವರಿಗೆ ಇದೆ. ಆದರೆ ಯಶಸ್ವಿಯಾಗಿ ಕಸಿ ಮಾಡಿಸಿಕೊಳ್ಳಲು ರೋಗಿಗೆ ಎಚ್‌ಎಲ್‌ಎ (ಹ್ಯೂಮನ್ ಲ್ಯೂಕೊಸೈಟ್ ಆಂಟಿಜೆನ್) ಹೋಲುವ ದಾನಿಯನ್ನು ಹುಡುಕುವ ಅಗತ್ಯವಿರುತ್ತದೆ. ಬಹುತೇಕ ಸಮಯದಲ್ಲಿ ಹೆಚ್ಚಿನ ರೋಗಿಗಳಿಗೆ ಸರಿಯಾದ ದಾನಿ ಸಿಗದೇ ಇರುವುದರಿಂದ ಕಸಿ ಮಾಡಲು ಸಾಧ್ಯವಾಗುವುದಿಲ್ಲ. ತುಂಬಾ ಕಡಿಮೆ ಸಂಖ್ಯೆಯ ಬ್ಲಡ್ ಸ್ಟೆಮ್ ಸೆಲ್ ದಾನಿಗಳು ನೋಂದಣಿ ಮಾಡಿಕೊಂಡಿರುವುದರಿಂದ ಹೋಲಿಕೆಯಾಗುವ ದಾನಿಯನ್ನು ಹುಡುಕುವುದು ತುಂಬಾ ಕಷ್ಟಕರ. ಹೀಗಾಗಿ, ಹೆಚ್ಚು ಹೆಚ್ಚು ಭಾರತೀಯರು ಈ ದಾನಕ್ಕೆ ನೋಂದಣಿ ಮಾಡಿಕೊಳ್ಳಬೇಕಿದೆ.

ರಕ್ತದ ಕಾಂಡಕೋಶದ ದಾನಿಯಾಗಿ ನೋಂದಣಿ ಮಾಡಿಕೊಳ್ಳಲು ದಾನಿಗಳು 18 ರಿಂದ 55 ವರ್ಷಗಳೊಳಗಿನ ಆರೋಗ್ಯವಂತ ಭಾರತೀಯ ವಯಸ್ಕನಾಗಿರಬೇಕು. ಒಂದು ಒಪ್ಪಿಗೆ ಅರ್ಜಿಯನ್ನು ಭರ್ತಿ ಮಾಡಬೇಕು ಮತ್ತು ಅಂಗಾಂಶದ ಕೋಶಗಳನ್ನು ಸಂಗ್ರಹಿಸಲು ನಿಮ್ಮ ದವಡೆಯ ಒಳಗಿನ ಸ್ವಾಬ್‌ ಸಂಗ್ರಹಿಸಲಾಗುತ್ತದೆ. ಆ ಮಾದರಿಯನ್ನು ನಂತರ ವಿಶ್ಲೇಷಣೆಗಾಗಿ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ಬಳಿಕ ಹೋಲಿಕೆಯಾಗುವ ರಕ್ತದ ಕಾಂಡಕೋಶ ದಾನಿ ಎಂಬುದಾಗಿ ಅಂತಾರಾಷ್ಟ್ರೀಯ ಸರ್ಚ್ ಪ್ಲಾಟ್‌ಫಾರಂನಲ್ಲಿ ನಿಮ್ಮ ಗುರುತು ಮರೆಮಾಚಿ ನೋಂದಣಿ ಮಾಡಲಾಗುತ್ತದೆ. ನೀವು ದಾನಕ್ಕೆ ಅರ್ಹರಾಗಿದ್ದರೆ, ನಿಮ್ಮ ಸ್ವಾಬ್‌ಕಿಟ್‌ ಅನ್ನು www.dkms-bmst.org/register ಇಲ್ಲಿಗೆ ಆರ್ಡರ್ ಮಾಡುವ ಮೂಲಕ ಪಡೆದುಕೊಳ್ಳಬಹುದು.

ಈವರೆಗೆ ಡಿಕೆಎಂಎಸ್-ಬಿಎಂಎಸ್‌ಟಿ ಇಂಡಿಯಾ ಒಂದು ಲಕ್ಷಕ್ಕೂ ಹೆಚ್ಚು ದಾನಿಗಳನ್ನು ದೇಶದಲ್ಲಿ ನೋಂದಣಿ ಮಾಡಿದೆ. 2010ರಿಂದ ಇದುವರೆಗೆ 110ಕ್ಕೂ ಹೆಚ್ಚು ಕಸಿಗಳನ್ನು ಮಾಡಿದೆ. ಸಾಧ್ಯವಾದಷ್ಟು ರೋಗಿಗಳಿಗೆ ಜೀವದಾನ ನೀಡುವುದಕ್ಕಾಗಿ ಭಾರತದಲ್ಲಿ ಹೆಚ್ಚು ಹೆಚ್ಚು ದಾನಿಗಳನ್ನು ನೋಂದಣಿ ಮಾಡಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.
ಈ ಸಂದರ್ಭದಲ್ಲಿ ಪ್ರೊ ಉಪಕುಲಪತಿಗಳಾದ ಡಾ. ಶರತ್ ರಾವ್, ಡಾ. ನಾರಾಯಣ್ ಸಭಾಹಿತ್, ಡಾ. ಎನ್ ಎಂ ಶರ್ಮ, ರಿಜಿಸ್ಟ್ರಾರ್ ಡಾ. ಗಿರಿಧರ್ ಕಿ, ಡಿಕೆಎಂಎಸ್ ಬಿಎಂಎಸ್‌ಟಿ ಫೌಂಡೇಶನ್ ಇಂಡಿಯಾದ ಆರೋಹಿ ತ್ರಿಪಾಠಿ ಇನ್ನಿತರರು ಉಪಸ್ಥಿತರಿದ್ದರು

spot_img

More articles

LEAVE A REPLY

Please enter your comment!
Please enter your name here