ಉಡುಪಿ: ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಉಡುಪಿ ಇದರ ಪ್ರಾಯೋಜಕತ್ವದಲ್ಲಿ ಬನ್ನಂಜೆ ಶ್ರೀನಾರಾಯಣಗುರು ಶಿವಗಿರಿ ಸಭಾಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ 375 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ (ಸ್ಕಾಲರ್‌ಶಿಪ್) ವಿತರಣೆ ಮಾಡಲಾಯಿತು.
ವಿದ್ಯಾರ್ಥಿ ನಿಧಿ ವಿತರಿಸಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಮಾತನಾಡಿ, ಒಂದು ಸಂಸ್ಥೆಯು ಲಾಭದಾಯಕವಾಗಿ ಬೆಳೆದು ಸಮಾಜದ ಸುಖಕಷ್ಟಗಳಿಗೆ ಸ್ಪಂದಿಸುವ ಕಾಯಗಳನ್ನು ಮಾಡುತ್ತ ಬಂದರೆ ಆ ಸಂಸ್ಥೆ ನೂರಾರು ವರ್ಷಗಳ ಕಾಲ ಬದುಕುತ್ತದೆ. ಈ ನಿಟ್ಟಿನಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಸಾಮಾಜಿಕ ಬದ್ಧತೆ ಶ್ಲಾಘನೀಯ ಎಂದು ಹಾರೈಸಿದರು.
ಸಮಾಜದಲ್ಲಿನ ದುಡಿಯುವ ವರ್ಗಕ್ಕೆ ಸಾಲ ಸೌಲಭ್ಯದ ಜೊತೆ ಉದ್ಯೋಗ ಕಲ್ಪಿಸಿದ ಸಂಸ್ಥೆ ಎಪ್ಪತ್ತು ವರ್ಷದಿಂದ ಬಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರ್ ಶಿಪ್ ನೀಡುತ್ತಾ ಬಂದಿರುವುದು ಉತ್ತಮ ಕಾರ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ್ ಫೈನಾನ್ಸ್ ಝೋನಲ್ ಬಿಸಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಮಾತನಾಡಿ, ಶ್ರೀರಾಮ್ ಫೈನಾನ್ಸ್ ವತಿಯಿಂದ ದೇಶಾದ್ಯಂತ 25 ಕೋಟಿ ರೂ. ಮೊತ್ತದ ವಿದ್ಯಾರ್ಥಿ ನಿಧಿ ವಿತರಣೆ ಮಾಡಲಾಗಿದೆ. ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಅನ್ನು ವಿದ್ಯಾಭ್ಯಾಸಕ್ಕೆ ಬಳಸಿಕೊಂಡು, ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು. ದೇಶಕಟ್ಟಲು ಉತ್ತಮ ಕೊಡುಗೆ ನೀಡಬೇಕು ಎಂದರು.
ಶ್ರೀರಾಮ್ ಫೈನಾನ್ಸ್ ರಾಷ್ಟ್ರೀಕೃತ ಬ್ಯಾಂಕ್ ಗಳು ನೀಡುವ ಎಲ್ಲ ರೀತಿಯ ಸಾಲಗಳನ್ನು ಗ್ರಾಹಕರಿಗೆ ನೀಡುತ್ತಿದೆ. ನೂತನ ವಿಮಾ ಸೌಲಭ್ಯಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಅತಿ ಸುಲಭ ಹಾಗೂ ಸರಳ ವಿಧಾನದ ಮೂಲಕ ಸಾಲಸೌಲಭ್ಯಗಳನ್ನು ನೀಡುವ ಮೂಲಕ ದೇಶಾದ್ಯಂತ ಗ್ರಾಹಕರ ಅಚ್ಚುಮೆಚ್ಚಿನ ಫೈನಾನ್ಸ್ ಆಗಿ ರೂಪುಗೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಧಾ ಗ್ರೂಪ್ ಆಫ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮನೋಹರ ಶೆಟ್ಟಿ, ಉದ್ಯಮಿ ದಿನೇಶ್ ಪುತ್ರನ್, ಉಡುಪಿ ಸ್ನೇಹ ಟ್ಯೂಟೆರಿಯಲ್ ಕಾಲೇಜಿನ ಮುಖ್ಯಸ್ಥ ಉಮೇಶ್ ನಾಯ್ಕ್, ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಮತ್ತು ವಕೀಲ ಪ್ರವೀಣ್ ಪೂಜಾರಿ, ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ನ ಸದಾಶಿವ ಅಮೀನ್, ನಾಗರಾಜ್ ಬಿ., ಉಡುಪಿ ವಿಭಾಗದ ಆರ್ ಬಿಎಚ್ ಗಣಪತಿ ನಾಯ್ಕ್, ಸುರೇಶ್ ಎಸ್ ಉಪಸ್ಥಿತರಿದ್ದರು.