ಉಡುಪಿ: ಕಲೆ ಎಲ್ಲರನ್ನು ಒಗ್ಗೂಡಿಸುವ ಮಾಧ್ಯಮ. ಅದು ಸಂಯುಕ್ತ ವಿಕಸನದ ಮಾರ್ಗ ಕೂಡ ಆಗಿದೆ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಆಶ್ರಯದಲ್ಲಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯುತ್ತಿರುವ ಸಂಸ್ಕೃತಿ ಉತ್ಸವದಲ್ಲಿ ಬುಧವಾರ ಪ್ರಭಾವತಿ ಶ್ರೀ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ 2024’ ಅನ್ನು ಸ್ವೀಕರಿಸಿ ಮಾತನಾಡಿದರು.
ಇಂದು ನಾವು ವಿಚಿತ್ರವಾದ ಕಾಲಘಟ್ಟದಲ್ಲಿದ್ದೇವೆ. ಮನುಷ್ಯನ ಸ್ನೇಹ ಸಂಬಂಧ ಮೊಬೈಲ್ ಗೆ ಸೀಮಿತಗೊಂಡಿದೆ. ಬೆಳಿಗ್ಗೆ ಎದ್ದು ಗುಡ್ ಮಾರ್ನಿಂಗ್, ಶುಭಾಶಯಗಳನ್ನು ಕಳುಹಿಸುವವರು ಎದುರಿಗೆ ಸಿಕ್ಕರೂ ನೋಡಲ್ಲ, ನಗುವುದಿಲ್ಲ. ಇದೊಂದು ಮನುಷ್ಯನಿಗೆ ತಟ್ಟಿರುವ ಒಂದು ಶಾಪ ಎಂದರು.
ಸಾಹಿತಿ ನಾಡೋಜ ಪ್ರೊ ಕೆ.ಪಿ.ರಾವ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನ ಭಾಷಣ ಮಾಡಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ, ಪ್ರಭಾ ಶೆಣ್ಯೆ ಉಪಸ್ಥಿತರಿದ್ದರು.
ವಿಶ್ವಪ್ರಭಾ ಪುರಸ್ಕಾರ ಸಮಿತಿಯ ಸಂಚಾಲಕ ನಾಗರಾಜ್ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ಶಿಲ್ಪಾ ಜೋಷಿ ನಿರೂಪಿಸಿದರು.