ಉಡುಪಿ: ಇಡೀ ಜಗತ್ತಿನಲ್ಲಿ ಇತ್ತೀಚಿನ ದಿನಗಳಲ್ಲಿ ವೃದ್ಧ ತಂದೆ- ತಾಯಿ ಅತಿ ಹೆಚ್ಚು ಕಡೆಗಣಿಸಲ್ಪಡುತ್ತಿದ್ದು, ಇದರಿಂದ ಕುಟುಂಬ ಸಂಬಂಧಗಳು ಶಿಥಿಲಗೊಳ್ಳುತ್ತಿದೆ. ಬೆಳೆದು ನಿಂತ ಮಕ್ಕಳು ವೃದ್ಧರಾದ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಅಟ್ಟುತ್ತಿದ್ದಾರೆ. ಪಾಶ್ಯಾತ್ಯ ಸಂಸ್ಕೃತಿಗಳು ನಮ್ಮನ್ನು ಆವರಿಸುತ್ತಿದೆ ಎಂದು ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಆತಂಕ ವ್ಯಕ್ತಪಡಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ವತಿಯಿಂದ ಉಡುಪಿಯ ಡಾನ್ ಬಾಸ್ಕೋ ಹಾಲ್ ನಲ್ಲಿ ಹಮ್ಮಿಕೊಂಡ ಸುದೃಢ ಕುಟುಂಬ, ಸುಭದ್ರ ಸಮಾಜ ಎಂಬ ವಿಷಯದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಗತ್ತಿನ ಎಲ್ಲಾ ಧರ್ಮಗಳಲ್ಲಿಯೂ ಕೌಟುಂಬಿಕ ವ್ಯವಸ್ಥಗೆ ಬಹಳ ಪ್ರಾಮುಖ್ಯತೆ ಇದೆ. ಎಲ್ಲೂ ಸಿಗದಂತಹ ಸೇವೆಗಳು ಕುಟುಂಬಲ್ಲಿ ನಮಗೆ ಸಿಗುತ್ತದೆ. ಬ್ರಹ್ಮಾಂಡ ಉಳಿಯಬೇಕಾದರೆ ಯಾವ ರೀತಿ ಸೂರ್ಯ, ಚಂದ್ರ, ನಕ್ಷತ್ರ, ಮಳೆ ಗಾಳಿ ಮುಖ್ಯವೋ, ಅದೇ ರೀತಿ ಈ ಸಮಾಜ ಉಳಿಯಬೇಕಾದರೆ ಕುಟುಂಬ ಪದ್ಧತಿ ಮುಖ್ಯ. ಕುಟುಂಬ ಇಲ್ಲದಿದ್ದರೆ ಸಮಾಜ ಉಳಿಯುವುದಿಲ್ಲ. ಕುಟುಂಬ ಸಂಬಂಧವನ್ನು ಹಾಳು ಮಾಡಿದವನನ್ನು ಪ್ರವಾದಿ ಮುಹಮ್ಮದರು ಮಸೀದಿಯಿಂದಲೇ ಓಡಿಸಿದ್ದರು ಎಂದರು.
ಮಣಿಪಾಲ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ರಾಘವೇಂದ್ರ ಮಾತನಾಡಿ, ಇಂದಿನ ಯುವಜನತೆ ಹೆಚ್ಚಾಗಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದು, ಪೋಷಕರು ಎಚ್ಚೆತ್ತುಕೊಳ್ಳದಿದ್ದರೆ ಸಮಾಜ ಇನ್ನಷ್ಟು ಹಾಳಾಗುವ ಸಾಧ್ಯತೆಗಳಿವೆ ಎಂದರು.
ಮನೋ ವೈದ್ಯ ಡಾ. ಮಾನಸ್, ಸುಗಮ್ಯ ಮಹಿಳಾ ಸಂಘದ ಸ್ಥಾಪಕಾಧ್ಯಕ್ಷೆ ಜನೇಟ್ ಬರ್ಬೋಝ ಮಾತನಾಡಿದರು. ಮಹಿಳಾ ವಿಭಾಗದ ಅಧ್ಯಕ್ಷೆ ವಾಜಿದಾ ತಬಸ್ಸುಮ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಡಾ. ಬಿ ಬಿ ಹೆಗ್ಡೆ ಕಾಲೇಜಿನ ಉಪನ್ಯಾಸಕ ಕೆ ಸುಕುಮಾರ್ ಶೆಟ್ಟಿ, ದ್ವಿತೀಯ ಬಹುಮಾನ ಪಡೆದ ಯಶಸ್ವಿ ಟುಟೋರಿಯಲ್ ಪಿಯು ಕಾಲೇಜಿನ ಸೂರಜ್ ಮತ್ತು ತೃತಿಯ ಬಹುಮಾನ ಪಡೆದ ಪ್ಲವರ್ ಆಫ್ ಪ್ಯಾರಡೈಸ್ ನ ಉಪನ್ಯಾಸಕಿ ಮರ್ಸೆಲ್ಲ ಡಿ ಸೋಜಾರ ಅವರನ್ನು ಸನ್ಮಾನಿಸಲಾಯಿತು.
ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಘಟಕದ ಅಧ್ಯಕ್ಷರಾದ ನಿಸಾರ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ರಯೀಸ್ ಅಹಮದ್ ವಂದಿಸಿದರು. ಜಲಾಲುದ್ದಿನ್ ಹಿಂದ್ ಕಾರ್ಯಕ್ರಮ ನಿರೂಪಿಸಿದರು.