ಉಡುಪಿ: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವದ ಅಂಗವಾಗಿ ವಿವಿಧ ತಾಲೂಕು ಹಾಗೂ ವಲಯಗಳಿಂದ ಇಂದು ಹೊರೆಕಾಣಿಕೆ ಸಮರ್ಪಿಸಲಾಯಿತು.
ಬೈಂದೂರು ತಾಲೂಕು, ಕುಂದಾಪುರ ತಾಲೂಕು, ಬ್ರಹ್ಮಾವರ ತಾಲೂಕು, ಮಂದಾರ್ತಿ ವಲಯ, ಕೋಟ ವಲಯ, ಉಪ್ಪೂರು, ಹಾವಂಜೆ ವಲಯ, ಕಲ್ಯಾಣಪುರ ಸಂತೆಕಟ್ಟೆ ವಲಯ, ಸಗ್ರಿ, ಚಕ್ರತೀರ್ಥ ವಲಯ, ಪೆರಂಪಳ್ಳಿ ವಲಯ, ಕೊಡವೂರು ವಲಯದಿಂದ ಅಕ್ಕಿ, ಬೆಲ್ಲ, ತೆಂಗಿನಕಾಯಿ, ತರಕಾರಿ ಹಾಗೂ ವಿವಿಧ ಸಾಮಾಗ್ರಿಗಳನ್ನು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ತಂದು ಮಠಕ್ಕೆ ಅರ್ಪಿಸಲಾಯಿತು.
ಜೋಡುಕಟ್ಟೆಯಿಂದ ಆರಂಭಗೊಂಡ ಹೊರಕಾಣಿಕೆ ಮೆರವಣಿಗೆ ಕೋರ್ಟ್ ರೋಡ್, ತ್ರಿವೇಣಿ ವೃತ್ತದ ಮೂಲಕ ಕನಕದಾಸ ರಸ್ತೆ, ರಥಬೀದಿ ಮೂಲಕ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ನಿರ್ಮಿಸಿರುವ ಉಗ್ರಾಣ ಕೇಂದ್ರಕ್ಕೆ ಬಂದು ತಲುಪಿತು.
ಮೆರವಣಿಗೆಯಲ್ಲಿ ಮಠದ ದಿವಾನ ನಾಗರಾಜ್ ಆಚಾರ್ಯ, ಪುತ್ತಿಗೆ ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಹೊರಕಾಣಿಕೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.