ಉಡುಪಿ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮ ಮಂದಿರ ಉದ್ಘಾಟನೆಗೆ ಬಂದು ಕರೆಸೇವಕರ ಮಾರಣಹೋಮಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಶಾಸಕ ಸುನಿಲ್ ಕುಮಾರ್ ಟಾಂಗ್ ನೀಡಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಸೇರಿದಂತೆ, ಎಲ್ಲಾ ರಾಜಕೀಯ ಪಕ್ಷದ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಆರಂಭದಿಂದಲೂ ರಾಮಮಂದಿರಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು. ಕರಸೇವಕರ ಮೇಲೆ ಗುಂಡಿನ ದಾಳಿ ಮಾಡಿದ ಕಾಂಗ್ರೆಸ್ ನ ನಿಲುವು ಏನು ಎಂಬುದು ಜನಮಾನಸಕ್ಕೆ ಗೊತ್ತಿದೆ ಎಂದರು.
ನಿರ್ಮಾಣವಾಗಿರುವುದು ರಾಮಮಂದಿರ ಅಲ್ಲ ರಾಷ್ಟ್ರ ಮಂದಿರ, ಕಾಲಘಟ್ಟ ಬದಲಾಗಿದೆ. ಖರ್ಗೆ, ಸೋನಿಯಾ ಗಾಂಧಿ ಸಹಿತ ಕಾಂಗ್ರೆಸ್ ನಾಯಕರು ರಾಮಮಂದಿರ ಉದ್ಘಾಟನೆಗೆ ಬರುವ ಮಾನಸಿಕತೆ ಮಾಡಿಕೊಂಡರೆ ಒಳ್ಳೆಯದು. ಚುನಾವಣೆ ಬಂದಾಗ ಹಿಂದೂ ಅನ್ನೋದರ ಬದಲು ನೈಜ ಹಿಂದುತ್ವ ಪ್ರದರ್ಶಿಸಿ, ಕಾಂಗ್ರೆಸ್ನವರು ಚುನಾವಣಾ ಹಿಂದುಗಳಾಗಬೇಡಿ ಎಂದು ಹೇಳಿದರು.
ಕನ್ನಡ ಹೋರಾಟಗಾರರ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಮಗ್ರ ಕನ್ನಡ ಭಾಷಾ ವಿಧೇಯಕವನ್ನು ಬಿಜೆಪಿ ಸರಕಾರ ಮಂಡನೆ ಮಾಡಿದೆ. ಅನುಮೋದನೆ ತೆಗೆದುಕೊಂಡ ವಿಧೇಯಕಕ್ಕೆ ಈ ಸರಕಾರ ಸ್ಪಂದಿಸಿಲ್ಲ, ಅಧಿಕಾರಕ್ಕೆ ಬಂದು ಎಂಟು ತಿಂಗಳಾದರೂ ಕೂಡ ಕಾಲಹರಣ ಮಾಡುತ್ತಿದೆ. ಆಡಳಿತದಲ್ಲಿ ಕನ್ನಡ, ನಡವಳಿಕೆಯಲ್ಲಿ ಕನ್ನಡ ನಮ್ಮ ಆಶಯವಾಗಿತ್ತು ಎಂದರು.
ಸರ್ಕಾರದ ನಿರ್ಲಕ್ಷ್ಯ ಬೆಂಗಳೂರಿನಲ್ಲಿ ನಡೆದ ಘಟನೆಗಳಿಗೆ ಕಾರಣವಾಗಿದೆ. ಕನ್ನಡ ಕಾರ್ಯಕರ್ತರ ಬಂಧನ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಕನ್ನಡ ಕಾರ್ಯಕರ್ತರ ಮೇಲಿನ ಮೊಕದ್ದಮೆ ವಾಪಸ್ಸು ಪಡೆದು, ತಕ್ಷಣ ಕನ್ನಡ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು. ಚುನಾವಣೆ ಬಂದಾಗ ಭಾಷಾಭಿಮಾನ ತೋರುತ್ತೀರಿ, ಹಿಂದಿಯ ವಿಷಯ ಬಂದಾಗ ಬಹಳ ಕನ್ನಡ ಅಭಿಮಾನ ವ್ಯಕ್ತ ಮಾಡಿದ್ದೀರಿ, ಈಗ ಕನ್ನಡ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದೀರಿ ಎಂದು ಟೀಕಿಸಿದರು.