ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ವಲಯ-1 ರ ಪರವಾನಿಗೆ ಹೊಂದಿರುವ ಆಟೋ ಚಾಲಕರು ನಗರದ ಯಾವುದೇ ನಿಲ್ದಾಣಗಳಲ್ಲಿ ರಿಕ್ಷಾ ನಿಲುಗಡೆ ಅವಕಾಶ ಕಲ್ಪಿಸಿ ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಆದೇಶ ಹೊರಡಿಸಿದ್ದು, ಇದು ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಟನೆ ಕೋರ್ಟ್ ಹಿಂಬದಿ ರಸ್ತೆ ಇವರ ಹೋರಾಟಕ್ಕೆ ಸಂದ ಜಯ ಎಂದು ಸಂಘಟನೆಯ ಅಧ್ಯಕ್ಷ ಜಯಂತ್ ಸುವರ್ಣ ತಿಳಿಸಿದ್ದಾರೆ.
ನಮ್ಮ ಸಂಘಟನೆಯು ರಿಕ್ಷಾ ಚಾಲಕರ ಮತ್ತು ಮಾಲಕರ ಶ್ರೇಯಸ್ಸಿಗೆ ದುಡಿಯುತ್ತಿರುವುದು ಮಾತ್ರವಲ್ಲದೆ, ಈ ಹಿಂದೆ ಅನೇಕ ಬಾರಿ ಪ್ರಾದೇಶಿಕ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಗಳಿಗೆ ರಿಕ್ಷಾ ಚಾಲಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಮನವಿ ಮಾಡಲಾಗಿತ್ತು. ಅಲ್ಲದೆ, ನಗರದಲ್ಲಿ ರಿಕ್ಷಾ ಚಾಲಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೈಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು. ಅಲ್ಲಿಯೂ ಸಂಘಟನೆಯ ಪರವಾಗಿ ಆದೇಶ ಬಂದಿತ್ತು.
ಇದರ ಸಂಪೂರ್ಣ ಶ್ರೇಯಸ್ಸು ನಮ್ಮ ಸಂಘಟನೆಗೆ ಸಲ್ಲುತ್ತದೆ. ಈ ಕೆಲಸವನ್ನು ಯಾವುದೇ ಯೂನಿಯನ್, ಸಂಘಟನೆಗಳು ಮಾಡಿದಲ್ಲ. ನಮ್ಮ ಸಂಘಟನೆ ಮಾಡಿದ ಕೆಲಸವನ್ನು ನಾವು ಮಾಡಿದ್ದು ಎಂದು ಕೆಲ ಯೂನಿಯನ್ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದ್ದಾರೆ.
ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಕಾರ್ಯದರ್ಶಿ ರಾಜೇಶ್ ಸುವರ್ಣ ಅವರು, ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.