ಉಡುಪಿ: ಇತ್ತೀಚೆಗೆ ಅಗಲಿದ ಸಮಾಜರತ್ನ ದಿ. ಕೆ. ಲೀಲಾಧರ ಶೆಟ್ಟಿ ಮತ್ತು ದಿ. ವಸುಂಧರಾ ಶೆಟ್ಟಿ ಅವರಿಗೆ ಸಾರ್ವಜನಿಕ ನುಡಿನಮನ ಸಮರ್ಪಣೆ ಸಹಿತ ಶ್ರದ್ಧಾಂಜಲಿ ಸಭೆಯು ಕಾಪು ಬಂಟರ ಸಂಘದ ಅಂಬಾ ಮಹಾಬಲ ಶೆಟ್ಟಿ ಆವರಣದಲ್ಲಿ ಇಂದು ನಡೆಯಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಲೀಲಾಧರ್ ಶೆಟ್ಟಿ ನಮ್ಮನ್ನು ಬಿಟ್ಟು ಅಗಲಿರುವುದು ಅರಗಿಸಿಕೊಳ್ಳಲಾಗದ ಸತ್ಯ. ನೋವಿನ ವಿಚಾರವಾದರೂ ನಾವು ಅದನ್ನು ಸ್ವೀಕರಿಸಲೇಬೇಕು. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಅವರು ಕಂಡ ಕನಸುಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ಹೊತ್ತುಕೊಳ್ಳೋಣ ಎಂದರು.
ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದವ್ಯಾಸ ಐತಾಳ್ ನುಡಿನಮನ ಸಲ್ಲಿಸಿ ಮಾತನಾಡಿ, ಲೀಲಾಧರ ಶೆಟ್ಟಿ ಸರ್ವ ಜಾತಿ ಮತ ಧರ್ಮ ಪಂಥದವರಿಗೆ ಬೇಕಾದ ವ್ಯಕ್ತಿಯಾಗಿದ್ದರು. ಅವರ ಅಗಲುವಿಕೆಯನ್ನು ಅರಗಿಸಿಕೊಳ್ಳುವುದು ಕಷ್ಟ ಸಾಧ್ಯ ಎಂದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಅವರು ನಡೆಸಿಕೊಂಡು ಬರುತ್ತಿದ್ದ ಎಲ್ಲಾ ಸೇವಾ ಕಾರ್ಯಗಳನ್ನು ಸಮಾಜ ಸ್ವೀಕರಿಸಿತ್ತು. ಎಲ್ಲಾ ಕ್ಷೇತ್ರಗಳಲ್ಲಿಯೂ ಅವರು ಕೈಯ್ಯಾಡಿಸಿದ್ದರು. ಸಮಾಜದ ಜತೆಗಿದ್ದು ಸಮಾಜಕ್ಕಾಗಿ ಬದುಕಿದ ವ್ಯಕ್ತಿತ್ವ ಅವರದ್ದಾಗಿತ್ತು. ಅವರನ್ನು ಮತ್ತು ಅವರು ಮಾಡಿದ ಸೇವಾ ಕಾರ್ಯಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಸಮಾಜಕ್ಕಾಗಿ ಬದುಕಿದವರು ಲೀಲಣ್ಣ. ಹಲವರ ಬಾಳು ಬೆಳಗಿಸಿದ್ದ ಅವರ ಕನಸನ್ನು ನನಸಾಗಿಸಲು ನಾವೆಲ್ಲರೂ ಒಂದಾಗೋಣ ಎಂದರು.
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ಮಜೂರು ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ರಶೀದ್ ಸಖಾಫಿ, ಕಾಪು ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಅಲ್ಭನ್ ರೋಡ್ರಿಗಸ್, ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿದರು.
ಲೀಲಾಧರ ಶೆಟ್ಟಿ ಅವರ ಸಹೋದರಿಯರಾದ ನಿರ್ಮಲಾ ವಿಠಲ ಶೆಟ್ಟಿ, ಗಂಗಾ ಭುಜಂಗ ಶೆಟ್ಟಿ, ವಿಠಲ ಶೆಟ್ಟಿ, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಕುಟುಂಬಸ್ಥರು, ಸಂಘಟಕರು, ಸಾವಿರಾರು ಮಂದಿ ಅಭಿಮಾನಿಗಳು, ಹಿತೈಷಿಗಳು, ಬಂಧು ಮಿತ್ರರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಕರಂದಾಡಿ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಶೆಟ್ಟಿ ಬಾಲಾಜಿ ವಂದಿಸಿದರು.