Monday, November 25, 2024

ಡಿ. 27ರಿಂದ 30ರ ವರೆಗೆ ಮಣಿಪಾಲ ಪದವಿಪೂರ್ವ ಕಾಲೇಜಿನ ಅಮೃತ ಮಹೋತ್ಸವ ಸಂಭ್ರಮ ‘ಅಮೃತ ಪರ್ವ’

Must read

ಉಡುಪಿ: 1948ರಲ್ಲಿ ಆರಂಭಗೊಂಡ ಮಣಿಪಾಲ ಪದವಿ ಪೂರ್ವ ಕಾಲೇಜು ಇದೀಗ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ‘ಅಮೃತ ಪರ್ವ’ ಶೀರ್ಷಿಕೆಯೊಂದಿಗೆ ಕಾಲೇಜಿನ ಅಮೃತ ಮಹೋತ್ಸವ ಸಂಭ್ರಮ 2023-24 ಅನ್ನು ಇದೇ ಬರುವ ಡಿ. 27ರಿಂದ 30ರ ವರೆಗೆ ಆಚರಿಸಲಾಗುತ್ತಿದೆ.


ಈ ಕುರಿತು ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಲೇಜಿನ ಪ್ರಾಂಶುಪಾಲೆ ರೂಪಾ ಎಲ್. ಭಟ್ ಅವರು, ಡಿ. 24ರಂದು ಹಳೆ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮ ನಡೆಯಲಿದ್ದು, ಹಳೆ ವಿದ್ಯಾರ್ಥಿಗಳು ಆಗಮಿಸುವ ನಿವೃತ್ತ ಶಿಕ್ಷಕರು, ಉಪನ್ಯಾಸಕರ ಪಾಠ ಪ್ರವಚನಗಳನ್ನು ಕೇಳಲಿದ್ದಾರೆ. ಬೆಳಿಗ್ಗೆ 8.15ಕ್ಕೆ ತರಗತಿಗಳು, ಪಿಟಿ ಅವಧಿಯಲ್ಲಿ ಕ್ರೀಡಾ ಜ್ಯೋತಿ ಪ್ರಜ್ವಲನೆ, ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಮಧ್ಯಾಹ್ನ ಫುಟ್ಬಾಲ್ ಪಂದ್ಯಾಟ ನಡೆಯಲಿದೆ ಎಂದರು.


ಡಿ.27ರಂದು ಬೆಳಿಗ್ಗೆ 9.30ಕ್ಕೆ ನವೀಕೃತ ಅಮೃತ ಮಹೋತ್ಸವ ರಂಗಮಂಟಪ ಹಾಗೂ ನವೀಕೃತ ತರಗತಿ ಕೊಠಡಿಗಳ ಉದ್ಘಾಟನೆ ನೆರವೇರಲಿದೆ. ಬಳಿಕ ವಸ್ತು ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ಅಂದು ಸಂಜೆ 6ಗಂಟೆಗೆ ನಡೆಯಲಿರುವ ಸಾಂಸ್ಕೃತಿಕ ಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಪ್ರಸೂತಿ ತಜ್ಞೆ ಡಾ. ಗಿರಿಜಾ ಉದ್ಘಾಟಿಸಲಿದ್ದಾರೆ. ಮಣಿಪಾಲ ಪ.ಪೂ. ಕಾಲೇಜಿನ ಆಡಳಿತಾಧಿಕಾರಿ ಸುಬ್ರಹ್ಮಣ್ಯ ಕಾರಂತ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ‘ಶ್ರೀಕೃಷ್ಣ ಪಾರಿಜಾತ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.


ಡಿ. 28ರಂದು ಸಂಜೆ 4ಗಂಟೆಗೆ ಮಣಿಪಾಲ ಸಿಂಡಿಕೇಟ್ ಸರ್ಕಲ್ ನಲ್ಲಿ ಮಣಿಪಾಲ ಠಾಣೆಯ ಉಪನಿರೀಕ್ಷಕ ದೇವರಾಜ್ ಟಿ.ವಿ. ಅವರು ಅಮೃತ ಶೋಭಾಯಾನಕ್ಕೆ ಚಾಲನೆ ನೀಡಲಿದ್ದಾರೆ. ಸಿಂಡಿಕೇಟ್ ಸರ್ಕಲ್ ನಿಂದ ಆರಂಭಗೊಳ್ಳುವ ಶೋಭಾಯಾನವು ಟೈಗರ್ ಸರ್ಕಲ್, ಗೋಲ್ಡನ್ ಜ್ಯುಬಿಲಿ ಹಾಲ್, ಆರ್.ಎಸ್.ಬಿ ಸಭಾಭವನದಿಂದ ಸಾಗಿಬಂದು ಕಾಲೇಜಿನಲ್ಲಿ ಮುಕ್ತಾಯಗೊಳ್ಳಲಿದೆ. ಬಳಿಕ ಸಂಜೆ 6ಗಂಟೆಗೆ ಪ್ರಾಥಮಿಕ‌ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಣಿಪಾಲ ಹೈಸ್ಕೂಲ್ ಟ್ರಸ್ಟ್ ಅಧ್ಯಕ್ಷ ಟಿ. ಸುಧಾಕರ ಪೈ ಅಧ್ಯಕ್ಷತೆ ವಹಿಸಲಿದ್ದಾರೆ.


ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಯಶ್ ಪಾಲ್ ಸುವರ್ಣ, ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ದೀಪಕ್ ದಿವಾಕರ ಕಿಣಿ ಗೌರವ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.


ಬಳಿಕ ಹಳೆ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ನಡೆಯಲಿದೆ. ಸಭಾಕಾರ್ಯಕ್ರಮದ ಬಳಿಕ ಕರ್ನಾಟಕ ಶಾಸ್ತ್ರೀಯ ಗಾಯನ, ರಾಮಕಥಾ ನೃತ್ಯ ರೂಪಕ ಹಾಗೂ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರಸ್ತುತಗೊಳ್ಳಲಿದೆ ಎಂದು ತಿಳಿಸಿದರು.


ಡಿ. 29ರಂದು ಸಂಜೆ 5.30ಕ್ಕೆ ಉಡುಪಿ ಸ್ವದಾಮ್ ಬ್ಯಾಂಡ್ ಅವರಿಂದ ‘ಸ್ವರ ಸಾಂಗತ್ಯ’ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ವಿಜ್ಞಾನ ಬರಹಗಾರ ಡಾ. ನಾ. ಸೋಮೇಶ್ವರ್ ಮೊದಲಾದವರು ಅತಿಥಿಗಳಾಗಿ‌ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ‘ನವದುರ್ಗಾ’ ಶಾಸ್ತ್ರೀಯ ನೃತ್ಯ ಹಾಗೂ ಹಳೆ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ಮಂಗಳೂರಿನ ಕಲಾಸಂಗಮ ಕಲಾವಿದರು ‘ಶಿವದೂತೆ ಗುಳಿಗೆ’ ತುಳು ನಾಟಕ ಪ್ರಸ್ತುತ ಪಡಿಸಲಿದ್ದಾರೆ ಎಂದು ಹೇಳಿದರು.


ಕಾಲೇಜಿನ ಉಪಪ್ರಾಂಶುಪಾಲೆ ಅನಿತಾ ಮಲ್ಯ ಮಾತನಾಡಿ, ಡಿ. 30ರಂದು ಸಂಜೆ 5ಗಂಟೆ ವೀಣಾವಾದನ ಪ್ರಸ್ತುತಗೊಳ್ಳಲಿದೆ. ಸಂಜೆ 6ಗಂಟೆಗೆ ಸಭಾಕಾರ್ಯಕ್ರಮ ಹಾಗೂ ಗೌರವ ಸಮರ್ಪಣೆ ನಡೆಯಲಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಣಿಪಾಲ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ರೂಪಾ ಎಲ್. ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ‘ಏಕಲವ್ಯ’ ನಾಟಕ ಪ್ರದರ್ಶನಗೊಳ್ಳಲಿದೆ. ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಜರುಗಲಿದೆ. ಆ ಬಳಿಕ ಮುಲ್ಕಿ ರಾಗ್ ರಂಗ್ ಆರ್ಕೆಸ್ಟ್ರಾ ಬಳಗದಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದರು.


ಸುದ್ದಿಗೋಷ್ಠಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ ಕಿಣಿ, ಕಾರ್ಯದರ್ಶಿ ಜಯರಾಮ್ ಶೆಟ್ಟಿಗಾರ್, ಮಣಿಪಾಲ ಹೈಸ್ಕೂಲ್ ಟ್ರಸ್ಟ್ ಸಂಚಾಲಕ ಪ್ರಕಾಶ್ ಶೆಟ್ಟಿ, ಟ್ರಸ್ಟಿ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here