ಉಡುಪಿ: ನಾವು ಹಿಂದುಗಳಾಗಿ ಉಳಿದರೆ ಮಾತ್ರ ರಾಮಮಂದಿರ ಮಂದಿರವಾಗಿ ಉಳಿಯುತ್ತದೆ. ಈ ದೇಶ ರಾಮರಾಜ್ಯವಾಗುತ್ತದೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪೇಜಾವರ ಮಠದ ಮುಂಭಾಗದಲ್ಲಿ ಅಭಿಮಾನಿಗಳಿಂದ ನಡೆದ 60ನೇ ವರ್ಷದ ಷಷ್ಠ್ಯಬ್ಧ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಮಕ್ಕಳ ಮೂಲಕ ಸಂಸ್ಕೃತಿ ಉಳಿಸುವ ಕಾರ್ಯ ನಿರಂತರ ನಡೆಯುತ್ತದೆ. ಮಂದಿರ ಮಾತ್ರವಲ್ಲ ರಾಮ ರಾಜ್ಯದ ಕನಸು ಕೂಡ ನನಸಾಗಬೇಕು. ರಾಮಭಕ್ತರೆಲ್ಲ ದೇಶಭಕ್ತರಾಗಬೇಕು ಎಂದರು.
ಸಮಾರಂಭವನ್ನು ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಆಶೀವರ್ಚನ ನೀಡಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ರಘು ಪತಿ ಭಟ್, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿದ್ವಾನ್ ಗೋಪಾಲ ಜೋಯಿಸ ಇರ್ವತ್ತೂರು, ಉದ್ಯಮಿ ನಾಗರಾಜ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.